ಮಧೂರು: ಉತ್ತಮ ಆಚಾರ, ವಿಚಾರಗಳನ್ನು ಮೈಗೂಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಮಾಜಿ ಧರ್ಮದರ್ಶಿ ನೀರಾಳ ಕೃಷ್ಣ ಹೊಳ್ಳ ಅವರು ಕರೆ ನೀಡಿದರು.
ಅವರು ಕೂಟ ಮಹಾಜಗತ್ತು ಸಾಲಿಗ್ರಾಮ ಇದರ ಕಾಸರಗೋಡು ಅಂಗಸಂಸ್ಥೆಯ ವತಿಯಿಂದ ವ್ಯವಸ್ಥೆ ಮಾಡಿದ 2024 ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.
ಮಧೂರು ಕೊಲ್ಯದ ಎಸ್.ಎನ್.ಮಯ್ಯ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಗಸಂಸ್ಥೆಯ ಅಧ್ಯಕ್ಷ ಶಂಕರನಾರಾಯಣ ಮಯ್ಯ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯ ಕೂಟ ಬಂಧುಗಳಾದ ವಾಸುದೇವ ಹೊಳ್ಳ ಎಲ್ಲಂಗಳ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಕೂಟ ಜಗತ್ತಿನ ಕೇಂದ್ರ ಸಂಸ್ಥೆಯ ಆರ್ಥಿಕ ಸಹಾಯ ಯೋಜನೆಯಾದ ಶ್ರೀ ಗುರು ನರಸಿಂಹ ಬಿಲಿಯನ್ ಪೌಂಡೇಶನ್ ವತಿಯಿಂದ ನೀಡಲಾದ ವಿದ್ಯಾ ಸಹಾಯಧನ ಹಾಗು ಆರೋಗ್ಯ ಸಹಾಯಧನವನ್ನು ಅತಿಥಿಗಳು ವಿತರಿಸಿದರು.
ಕಾಸರಗೋಡು ಅಂಗಸಂಸ್ಥೆಯ ನೇತೃತ್ವದಲ್ಲಿ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನಕ್ಕೆ ಶ್ರೀ ಗುರು ಸ್ಥಾನ ಭೇಟಿ ಕಾರ್ಯಕ್ರಮ ಜನವರಿ 7 ರಂದು ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕೂಟ ಬಂಧುಗಳು ಭಾಗವಹಿಸುವಂತೆ ಕಾರ್ಯದರ್ಶಿ ನರಸಿಂಹ ಮಯ್ಯ ಎಂ. ವಿನಂತಿಸಿದ್ದಾರೆ. ಎಸ್.ಎನ್.ಮಯ್ಯ ಮಧೂರು ಸ್ವಾಗತಿಸಿ, ಅಂಗಸಂಸ್ಥೆಯ ಕೋಶಾಧಿಕಾರಿ ಬಿ.ಕೃಷ್ಣ ಕಾರಂತ ಬನ್ನೂರು ವಂದಿಸಿದರು.