ಅಮೆರಿಕದ ಜಾರ್ಜಿಯಾ ಟೆಕ್ ಜೀವ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಹೊಸ ಬಗೆಯ ಯೀಸ್ಟ್ ಸಂಶೋಧಿಸಿದ್ದಾರೆ. ಈ ಯೀಸ್ಟ್ ಸೂರ್ಯನ ಬೆಳಕನ್ನು ಬಳಸಿಕೊಂಡು ಜೀವಿಸಬಲ್ಲ, ಶಕ್ತಿ ಉತ್ಪಾದಿಸಬಲ್ಲ ಗುಣವನ್ನು ಹೊಂದಿದೆ. ಜೊತೆಗೆ, ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮಾಲಿನ್ಯಕಾರಿ ವಸ್ತುಗಳನ್ನು ಕೊಳೆಯುವಂತೆ, ಆಹಾರ ಉತ್ಪನ್ನಗಳನ್ನು ಅತಿ ಬೇಗನೇ ತಯಾರಿಸುವಂತೆ ಕಾರ್ಯನಿರ್ವಹಿಸಬಲ್ಲ ಶಕ್ತಿಯನ್ನು ಈ ಹೊಸ ಬಗೆಯ ಯೀಸ್ಟ್ ಹೊಂದಿದೆ.
ನಾವು ಯೀಸ್ಟ್ (ಬುರುಗು) ಅನ್ನು ಎಲ್ಲೆಲ್ಲಿ ಬಳಸುತ್ತೇವೆ? ಬೇಕರಿಯಲ್ಲಿ ದೊರಕುವ ಬಗೆಬಗೆಯ ಬ್ರೆಡ್, ಕೇಕ್ ಹಾಗೂ ಕುರುಕಲು ತಿಂಡಿಗಳಲ್ಲಿ ಯೀಸ್ಟ್ ಯಥೇಚ್ಛವಾಗಿ ಬಳಕೆಯಾಗುತ್ತದೆ. ವೈನ್ ಇತ್ಯಾದಿ ಪಾನೀಯಗಳ ತಯಾರಿಯಲ್ಲೂ ಬಳಕೆಯಾಗುತ್ತದೆ. ಇವಿಷ್ಟೇ ಅಲ್ಲದೇ, ಔಷಧ ತಯಾರಿ, ನೀರಿನ ಮರುಬಳಕೆಯ ಪ್ರಕ್ರಿಯೆಯಲ್ಲೂ ಯೀಸ್ಟ್ ಪ್ರಧಾನ ಪಾತ್ರ ವಹಿಸುತ್ತದೆ.
ಯೀಸ್ಟ್ ನ ಮುಖ್ಯ ಕೆಲಸ ಅದು ಸಂಪರ್ಕಕ್ಕೆ ಬರುವ ಯಾವುದೇ ಬಗೆಯ ಸಸ್ಯಮೂಲ ಅಥವಾ ಪ್ರಾಣಿಮೂಲ ಜೀವಕೋಶಗಳನ್ನು ಕುಸಿಯುವಂತೆ, ಕಳಿಯುವಂತೆ ಅಥವಾ ಕೊಳೆಯುವಂತೆ ಮಾಡುವುದು. ಇದರಿಂದ ನೊರೆ ಅಥವಾ ಬುರುಗು ಉತ್ಪತ್ತಿಯಾಗಿ ತಾನು ಇರುವ ಮಾಧ್ಯಮ ಮೃದುವಾಗುತ್ತದೆ. ಇದೇ ಕಾರಣಕ್ಕಾಗಿ ಬ್ರೆಡ್ ಇತ್ಯಾದಿ ಆಹಾರ ಉತ್ಪನ್ನಗಳಲ್ಲಿ ಯೀಸ್ಟ್ ಬಳಕೆಯಾಗುತ್ತದೆ. ಅಲ್ಲದೇ, ಆಹಾರ ಪದಾರ್ಥವು ಮೃದುವಾಗುವ, ಅಥವಾ ಪಾನೀಯವು ಬೇಗನೇ ಹುದುಗುವಂತೆ ಮಾಡಲು ಇದನ್ನು ಬಳಸುವುದು ಹೆಚ್ಚು.
ವಾಸ್ತವವಾಗಿ ಯೀಸ್ಟ್ ಒಂದು ಏಕಕೋಶ ಜೀವಿ. ಅಚ್ಚರಿಯೆಂದರೆ, ಭೂಮಿಯ ಮೇಲಿನ ಬಹುತೇಕ ಎಲ್ಲ ಜೀವಿಗಳಿಗೂ ಶಕ್ತಿ ಉತ್ಪಾದನೆಗೆ ಸೂರ್ಯನ ಬೆಳಕಿನ ಅಗತ್ಯವಿರುತ್ತದೆ. ಆದರೆ, ಯೀಸ್ಟ್ ಬೆಳಕಿನ ಅಗತ್ಯವೇ ಇಲ್ಲದೇ ಬದುಕುವ ಹಾಗೂ ಶಕ್ತಿ ಉತ್ಪಾದಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತದೆ. ತಾನು ಬದುಕಲು ಬೇರೆ ಜೀವಿ ಅಥವಾ ಮಾಧ್ಯಮವನ್ನು ಅವಲಂಬಿಸುವ ಪರಾವಲಂಬಿ ಜೀವಿ ಇದಾಗಿದೆ. ಆದರೆ, ವಿಜ್ಞಾನಿಗಳು ಇದೀಗ ಸೃಷ್ಟಿಸಿರುವ ಯೀಸ್ಟ್ ಗೆ ಬದುಕಲು ಒಂದು ಮಾಧ್ಯಮವೇ ಬೇಡ. ಅದಕ್ಕೆ ಶಕ್ತಿ ಮೂಲ ಕೇವಲ ಬೆಳಕು ಮಾತ್ರವೇ ಸಾಕು.
ಏನಿದು ಸಂಶೋಧನೆ?
ಜಾರ್ಜಿಯಾ ಟೆಕ್ ಜೀವ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಬ್ರೆಡ್ ತಯಾರಿಸಲು ಬಳಸುವ ಸಾಮಾನ್ಯ ಯೀಸ್ಟ್ ತೆಗೆದುಕೊಂಡು ಅದಕ್ಕೆ ಪ್ರಖರವಾದ ಸೂರ್ಯನ ಬೆಳಕನ್ನು ಹಾಯಿಸಿದ್ದಾರೆ. ಸರಳವಾಗಿ ಹೇಳಬೇಕೆಂದರೆ ಇದಿಷ್ಟೇ ಈ ಸಂಶೋಧನೆಯ ಸಾರಾಂಶ. ಸೂರ್ಯನ ಬೆಳಕು ಬೀಳುತ್ತಲೇ ಯೀಸ್ಟ್ ಅತಿ ಚುರುಕಾಗಿ ಕೆಲಸ ಮಾಡಿದೆ. ತನ್ನ ಕೊಳೆಸುವ ಶಕ್ತಿಯನ್ನು ದುಪಟ್ಟು ಮಾಡಿಕೊಂಡು ತಾನು ಸಂಪರ್ಕಕ್ಕೆ ಬರುವ ಬ್ರೆಡ್ ಮಾದರಿಯ ಹಿಟ್ಟನ್ನು ದುಪಟ್ಟು ವೇಗದಲ್ಲಿ ಬೇಯಿಸಲು ಹದವಾದ ರೂಪಕ್ಕೆ ಸಿದ್ಧಪಡಿಸಿದೆ.
ಬೆಳಕಿನ ಸಂಪರ್ಕಕ್ಕೆ ಬರುವ ಯೀಸ್ಟ್ ನ ಈ ವರ್ತನೆಯಿಂದ ವಿಜ್ಞಾನಿಗಳು ಬೆರಗಾಗಿದ್ದಾರೆ. ಏಕೆಂದರೆ, ಇದು ಕೇವಲ ಆಹಾರ ಉತ್ಪಾದನೆಯ ವೇಗವನ್ನು ಹೆಚ್ಚಿಸುವುದು ಮಾತ್ರವಲ್ಲ; ಈ ವಿಜ್ಞಾನಿಗಳಿಗೆ ಈ ಹೊಸ ಸಂಶೋಧನೆ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ದೊಡ್ಡ ವರದಾನವಾಗಿ ಕಂಡಿದೆ. ವಿಜ್ಞಾನಿ ಆಂಟನಿ ಬರ್ನಟಿ ಅವರ ಪ್ರಕಾರ, '' "ಭೂಮಿಯ ಮೇಲಿನ ಕೆಲವು ವಸ್ತುಗಳು ಯಾವುದೇ ಕಾರಣಕ್ಕೂ ಕೊಳೆಯುವುದಿಲ್ಲ. ಕೊಳೆತರೂ ಅದರ ವೇಗ ಬಹಳ ಕಡಿಮೆ. ಉದಾಹರಣೆಗೆ ಪ್ಲಾಸ್ಟಿಕ್. ಆದರೆ, ಈ ಹೊಸ ಯೀಸ್ಟ್ ಬಳಸಿಕೊಂಡು ಪ್ಲಾಸ್ಟಿಕ್ ಮಾದರಿಯ ವಸ್ತುಗಳನ್ನು ಬೇಗನೇ ಕೊಳೆಯುವಂತೆ ಮಾಡಬಹುದು. ಹಾಗಾಗಿ, ಪ್ಲಾಸ್ಟಿಕ್‌ನಿಂದ ಉಂಟಾಗುವ ಪರಿಸರ ಮಾಲಿನ್ಯಕ್ಕೆ ಪರಿಹಾರವೇ ಇಲ್ಲ ಎಂಬ ಕೊರಗು ಈ ಯೀಸ್ಟ್ ನಿಂದ ದೂರವಾಗಲಿದೆ.
ಎಲ್ಲೆಲ್ಲಿ ಇದರ ಬಳಕೆ?
ಬಹುಮುಖ್ಯವಾಗಿ ಎರಡು ಮುಖ್ಯ ಕ್ಷೇತ್ರಗಳಲ್ಲಿ ಈ ಬಗೆಯ ಯೀಸ್ಟ್ ಬಳಸಬಹುದು. ಮೊದಲ ಕ್ಷೇತ್ರ ಆಹಾರ. ಬ್ರೆಡ್ ಮಾದರಿಯ ಆಹಾರದ ಹಿಟ್ಟಿನ ತಯಾರಿಗೆ ಈಗ ಕನಿಷ್ಠವೆಂದರೂ ಎರಡು ಗಂಟೆ ಕಾಲ ಬೇಕಿದೆ. ಈ ಸಮಯವನ್ನು ಕೇವಲ 15 ನಿಮಿಷಕ್ಕೆ ಕುಗ್ಗಿಸಬಹುದಾಗಿದೆ. ಹಾಗಾಗಿ, ಒಟ್ಟಾರೆ ಆಹಾರ ತಯಾರಿಯ ಸಮಯ ಕಡಿಮೆಯಾಗುತ್ತದೆ. ಎರಡನೆಯ ಕ್ಷೇತ್ರ ಕೈಗಾರಿಕೆ ಅಥವಾ ಪರಿಸರ ಮಾಲಿನ್ಯ ನಿಯಂತ್ರಣ. ಕೆಲವು ಪೆಟ್ರೋಲಿಯಂ ಉತ್ಪನ್ನಗಳ ತಯಾರಿಗೆ ಯೀಸ್ಟ್ ಇಂದು ಬಳಕೆಯಾಗುತ್ತಿದೆ. ಉದಾಹರಣೆಗೆ, ವಿವಿಧ ಪೆಟ್ರೋಲಿಯಂ ಉತ್ಪನ್ನಗಳ ವಿಭಜನೆಯ ಕೆಲಸ. ಈ ಕೆಲಸವೂ ಸಾಂಪ್ರದಾಯಿಕ ವಿಧಾನಕ್ಕಿಂತ ಅತಿ ಬೇಗನೇ ಆಗುತ್ತದೆ. ಇನ್ನು ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಪ್ಲಾಸ್ಟಿಕ್ ಮಾತ್ರವೇ ಅಲ್ಲದೇ, ಯಾವುದೇ ಬಗೆಯ ಹಾನಿಕಾರಕ ವಸ್ತುವನ್ನು ಕೊಳೆಯುವಂತೆ ಅಥವಾ ದುರ್ಬಲಗೊಳ್ಳುವಂತೆ ಮಾಡಬಲ್ಲ ಸಾಧ್ಯತೆ ಇದರಿಂದ ಸಿಗುತ್ತದೆ.
ವಿಶೇಷವಾದ ಸಿದ್ಧತೆಗಳು ಬೇಡ
ಈ ಯೀಸ್ಟ್ ತಯಾರಿಗೆ ವಿಶೇಷವಾದ ಸಿದ್ಧತೆಗಳು ಬೇಕಿಲ್ಲ. ಸೂರ್ಯನ ಬೆಳಕನ್ನು ನಿರ್ದಿಷ್ಟ ರೀತಿಯಲ್ಲಿ ಯೀಸ್ಟ್ ಮೇಲೆ ಬೀಳುವಂತೆ ಮಾಡುವುದು. ಈ ವಿಧಾನವನ್ನು ವಿಜ್ಞಾನಿಗಳು ನೀಡುತ್ತಾರೆ. ಬಳಿಕ ಉತ್ಪನ್ನವಾಗುವ ಯೀಸ್ಟ್ ಅನ್ನು ಬೇಕಾದ ಕೆಲಸಕ್ಕೆ ಬಳಸಿಕೊಳ್ಳುವುದು. ಇದಿಷ್ಟೇ ಬಳಕೆದಾರರು ಮಾಡಬೇಕಿರುವ ಕೆಲಸ. "ಪರಿಸರದಲ್ಲಿ ಈಗಾಗಲೇ ಯಥೇಚ್ಛವಾಗಿ ಲಭ್ಯವಿರುವ ಯೀಸ್ಟ್ ಬಳಸಿಕೊಂಡು ಪರಿಸರವನ್ನು ಕಾಪಾಡುವ ಕೆಲಸವನ್ನು ಮಾಡಬಹುದು. ಇದಕ್ಕಾಗಿ ಪ್ರತ್ಯೇಕವಾದ ಸಂಶೋಧನೆಯನ್ನು ಮಾಡಬೇಕಿಲ್ಲ. ಜೊತೆಗೆ, ಈಗಾಗಲೇ ಉತ್ಪಾದನೆ ವೆಚ್ಚ ಕಡಿಮೆ ಇರುವ ಪ್ಲಾಸ್ಟಿಕ್ ಬಳಕೆ ತ್ಯಜಿಸುವ ಅಗತ್ಯವೂ ಇಲ್ಲ. ಏಕೆಂದರೆ, ಅದನ್ನು ಕೊಳೆಯುವಂತೆ ಮಾಡಬಲ್ಲ ವಿಧಾನ ಸಿಕ್ಕಿದೆ" ಎಂದು ವಿಜ್ಞಾನಿ ಆಂಟನಿ ಬರ್ನಟಿ ವ್ಯಾಖ್ಯಾನಿಸಿದ್ದಾರೆ.