ನವದೆಹಲಿ (PTI): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು ಮರುಸ್ಥಾಪಿಸಿದ 2023ರ ಆಗಸ್ಟ್ 7ರ ಅಧಿಸೂಚನೆಯನ್ನು ರದ್ದು ಮಾಡುವಂತೆ ಕೋರಿದ್ದ ಅರ್ಜಿಯನ್ನು ವಜಾಗೊಳಿಸಿರುವ ಸುಪ್ರೀಂ ಕೋರ್ಟ್, ಅರ್ಜಿದಾರ ಅಶೋಕ್ ಪಾಂಡೆ ಅವರಿಗೆ ₹1 ಲಕ್ಷ ದಂಡ ವಿಧಿಸಿದೆ.
ನವದೆಹಲಿ (PTI): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು ಮರುಸ್ಥಾಪಿಸಿದ 2023ರ ಆಗಸ್ಟ್ 7ರ ಅಧಿಸೂಚನೆಯನ್ನು ರದ್ದು ಮಾಡುವಂತೆ ಕೋರಿದ್ದ ಅರ್ಜಿಯನ್ನು ವಜಾಗೊಳಿಸಿರುವ ಸುಪ್ರೀಂ ಕೋರ್ಟ್, ಅರ್ಜಿದಾರ ಅಶೋಕ್ ಪಾಂಡೆ ಅವರಿಗೆ ₹1 ಲಕ್ಷ ದಂಡ ವಿಧಿಸಿದೆ.
'ಮೋದಿ' ಉಪನಾಮ ಬಳಕೆಗೆ ಸಂಬಂಧಿಸಿದ ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಅವರು ತಪ್ಪಿತಸ್ಥರು ಎಂದು ಗುಜರಾತ್ ಕೋರ್ಟ್ ಹೇಳಿತ್ತು. ರಾಹುಲ್ ಅವರಿಗೆ ಎರಡು ವರ್ಷಗಳ ಜೈಲುಶಿಕ್ಷೆ ವಿಧಿಸಿತ್ತು. ಇದರ ಪರಿಣಾಮವಾಗಿ ರಾಹುಲ್ ಅವರ ಲೋಕಸಭಾ ಸದಸ್ಯತ್ವವು ರದ್ದಾಗಿತ್ತು.
ರಾಹುಲ್ ಅವರಿಗೆ ವಿಧಿಸಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿತು. ಇದರ ನಂತರ ರಾಹುಲ್ ಅವರ ಸದಸ್ಯತ್ವವನ್ನು ಲೋಕಸಭೆಯ ಅಧಿಸೂಚನೆ ಮೂಲಕ ಮರುಸ್ಥಾಪಿಸಲಾಯಿತು. ರಾಹುಲ್ ಅವರು ವಯನಾಡು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಪಾಂಡೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ವಿಭಾಗೀಯ ಪೀಠ ನಡೆಸಿತು. ಅರ್ಜಿಯನ್ನು ಎರಡು ಬಾರಿ ವಿಚಾರಣೆಗೆ ಎತ್ತಿಕೊಂಡಿದ್ದಾಗಲೂ ಪಾಂಡೆ ಅವರು ಪೀಠದ ಎದುರು ಹಾಜರಾಗಿರಲಿಲ್ಲ.
ಅಲ್ಲದೆ, ಪಾಂಡೆ ಅವರು ಈ ಹಿಂದೆ ಸಲ್ಲಿಸಿದ್ದ ಎರಡು ಅರ್ಜಿಗಳನ್ನು ತಿರಸ್ಕರಿಸಿದ್ದ ಕೋರ್ಟ್ ಒಂದು ಅರ್ಜಿಗೆ ₹5 ಲಕ್ಷ ಹಾಗೂ ಇನ್ನೊಂದು ಅರ್ಜಿಗೆ ₹1 ಲಕ್ಷ ದಂಡ ವಿಧಿಸಿತ್ತು ಎಂಬುದನ್ನು ಪೀಠವು ಹೇಳಿತು. 'ಇಂತಹ ಹುರುಳಿಲ್ಲದ ಅರ್ಜಿಗಳನ್ನು ಸಲ್ಲಿಸುವುದರಿಂದ ನ್ಯಾಯಾಲಯದ ಅಮೂಲ್ಯ ಸಮಯವು ವ್ಯರ್ಥವಾಗುತ್ತದೆ' ಎಂದು ಹೇಳಿದ ಪೀಠವು ರಾಹುಲ್ ಸದಸ್ಯತ್ವಕ್ಕೆ ಸಂಬಂಧಿಸಿದ ಅರ್ಜಿಯನ್ನು ವಜಾಗೊಳಿಸಿತು.
ಅರ್ಜಿದಾರರು ಲೋಕಸಭಾ ಸ್ಪೀಕರ್, ಕೇಂದ್ರ ಸರ್ಕಾರ, ಚುನಾವಣಾ ಆಯೋಗ ಮತ್ತು ರಾಹುಲ್ ಅವರನ್ನು ಪ್ರತಿವಾದಿಯಾಗಿ ಹೆಸರಿಸಿದ್ದರು.
ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪ್ರಮಾಣ ವಚನ ಸ್ವೀಕರಿಸಿದ ರೀತಿಯು ದೋಷಪೂರಿತವಾಗಿತ್ತು ಎಂದು ದೂರಿ ಪಾಂಡೆ ಅವರು ಪಿಐಎಲ್ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಪಾಂಡೆ ಅವರಿಗೆ ₹5 ಲಕ್ಷ ದಂಡ ವಿಧಿಸಿತ್ತು.