ಅಯೋಧ್ಯೆ: 'ರಾಮಮಂದಿರ ನಿರ್ಮಾಣದಲ್ಲಿ ಈ ತಲೆಮಾರನ್ನು ಶಿಲ್ಪಿಯನ್ನಾಗಿ ಆಯ್ಕೆ ಮಾಡಲಾಗಿದೆ. ಸಾವಿರಾರು ವರ್ಷಗಳ ಕಾಲ ಇರುವ ಈ ಮಂದಿರವನ್ನು ನೋಡುವ ಪ್ರತಿಯೊಬ್ಬರೂ ಈ ಕಾಲಘಟ್ಟದಲ್ಲಿರುವ ಪ್ರತಿಯೊಬ್ಬರನ್ನೂ ಸ್ಮರಿಸಲಿದ್ದಾರೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಮಮಂದಿರದಲ್ಲಿ ಬಾಲರಾಮನ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ನೆರವೇರಿಸಿ ಅವರು ಮಾತನಾಡಿದರು.
'ಮಂದಿರವೇನೋ ನಿರ್ಮಾಣವಾಯಿತು. ಈ ಅಮೃತ ಕಾಲದಲ್ಲೇ ಮುಂದಿನ ಸಾವಿರ ವರ್ಷಗಳಲ್ಲಿ ಭಾರತ ಹೇಗಿರಬೇಕು ಎಂಬುದರ ಯೋಜನೆ ರೂಪಿಸಬೇಕಿದೆ. ಅದಕ್ಕಾಗಿ ಇಂದೇ ಶಪಥವನ್ನು ತೆಗೆದುಕೊಳ್ಳಬೇಕಿದೆ' ಎಂದರು.
'ಅಯೋಧ್ಯೆಯ ಈ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಂಡ ಬಾಲರಾಮ, ಭಾರತದ ದೃಷ್ಟಿ, ದರ್ಶನ, ದಿಗ್‌ದರ್ಶನದ ಮಂದಿರ. ರಾಮ ಭಾರತದ ಆಧಾರ, ವಿಚಾರ, ವಿಧಾನ, ಚೇತನಾ, ಚಿಂತನಾ, ಪ್ರತಿಷ್ಠಾ, ಪ್ರಭಾವ, ನೀತಿ, ನಿತ್ಯತಾ, ನಿರಂತರತೆ, ವ್ಯಾಪಕ, ವಿಶ್ವವೂ ಹಾಗೂ ವಿಶ್ವಾತ್ಮವೂ ಹೌದು' ಎಂದಿದ್ದಾರೆ.
ರಾಮ ಬೆಂಕಿ ಅಲ್ಲ, ಶಕ್ತಿ
'ರಾಮಮಂದಿರ ನಿರ್ಮಾಣಗೊಂಡರೆ ಬೆಂಕಿ ಬೀಳುತ್ತದೆ ಎಂದು ಕೆಲವರು ಹೇಳುತ್ತಿದ್ದರು. ಭಾರತದ ಪವಿತ್ರತೆ ಅರಿಯದ ಮನಸ್ಸುಗಳು ಇಂಥ ಹೇಳಿಕೆಗಳನ್ನು ನೀಡಿವೆ. ಆದರೆ ಧೈರ್ಯ, ಸದ್ಭಾವ ಮತ್ತು ಸಮನ್ವತೆಯ ಪ್ರತೀಕವೂ ಆದ ಭಾರತದಲ್ಲಿ, ರಾಮಮಂದಿರ ಎಂಬುದು ಬೆಂಕಿ ಆಗಲು ಸಾಧ್ಯವಿಲ್ಲ. ಅದು ನಮ್ಮೆಲ್ಲರ ಶಕ್ತಿಯಾಗಿದೆ. ಸಮಾಜದ ಪ್ರತಿ ವರ್ಗದವರಿಗೂ ಉಜ್ವಲ ಭವಿಷ್ಯ ನೀಡಲಿದೆ. ರಾಮ ಎಂಬುದು ವರ್ತಮಾನವಲ್ಲ, ಅನಂತಕಾಲ' ಎಂದು ಮೋದಿ ಹೇಳಿದ್ದಾರೆ.
'ಈ ಐತಿಹಾಸಿಕ ಸಮಯದಲ್ಲಿ ರಾಮಮಂದಿರ ನಿರ್ಮಾಣಕ್ಕೆ ತ್ಯಾಗ ಮತ್ತು ಬಲಿದಾನ ನೀಡಿದ ಪ್ರತಿಯೊಬ್ಬರನ್ನೂ ನೆನೆಯುವ ಸಮಯವಿದು. ಅವರ ಸಮಪರ್ಣೆಯಿಂದಾಗಿ ನಾವು ಇಂದು ಈ ಶುಭದಿನವನ್ನು ನೋಡುತ್ತಿದ್ದೇವೆ. ಹೀಗಾಗಿ ಈ ಕ್ಷಣವು ಉತ್ಸವದ ಕ್ಷಣವೂ ಹೌದು. ಇದು ಕೇವಲ ವಿಜಯದ ದಿನ ಮಾತ್ರವಲ್ಲ, ವಿನಯದ ದಿನವೂ ಹೌದು' ಎಂದಿದ್ದಾರೆ.
'ಯುವಜನತೆಯ ಶಕ್ತಿಯಿಂದ ಭಾರತ ಇಂದು ಸಂಪದ್ಭರಿತವಾಗಿದೆ. ಇಂಥ ಅಮೃತ ಕಾಲ ಬರಲು ಬಹಳಷ್ಟು ವರ್ಷಗಳನ್ನು ನಾವು ಕಾಯಬೇಕು. ಹೀಗಾಗಿ ಈಗ ನಾವು ವಿರಮಿಸುವಂತಿಲ್ಲ. ನಿಮ್ಮ ಬೆನ್ನಿಗೆ ಸಾವಿರಾರು ವರ್ಷಗಳ ಪರಂಪರೆಯ ಪ್ರೇರಣೆ ಇದೆ. ಚಂದ್ರನ ಅಂಗಳದಲ್ಲಿ ತಿರಂಗಾ ಹಾರಾಡುತ್ತಿದೆ. 15 ಲಕ್ಷ ಕಿಲೋ ಮೀಟರ್ ದೂರದಲ್ಲಿ ಆದಿತ್ಯ ಎಲ್1 ಅಧ್ಯಯನ ನಡೆಸುತ್ತಿದೆ. ಇಂಥ ಎಲ್ಲಾ ಸಾಧನೆಗಳ ಮೂಲಕ ಬರಲಿರುವ ಸಮಯವು ಸಫಲತೆಯದ್ದಾಗಿರಲಿದೆ. ಈ ಭವ್ಯ ರಾಮಮಂದಿರ ಇವೆಲ್ಲದಕ್ಕೂ ಸಾಕ್ಷಿಯಾಗಲಿದೆ. ಗುರಿಯು ಸತ್ಯ, ಸಾಮೂಹಿಕ, ಸಂಘಟಿತ ಶಕ್ತಿಯಿಂದ ಕೂಡಿದ್ದಲ್ಲಿ, ಅದರ ಸಾಕಾರ ಶತಸಿದ್ಧ' ಎಂದರು.
'ಆದಿವಾಸಿ ಮಹಿಳೆ ಶಬರಿಯ ಒಂದೇ ದೃಢ ಸಂಕಲ್ಪ, 'ನನ್ನ ರಾಮ ಬಂದೇ ಬರುತ್ತೇನೆ' ಎಂಬುದು. ಇದೇ ವಿಶ್ವಾಸವನ್ನು ಭಾರತದ ಪ್ರತಿಯೊಬ್ಬರೂ ಹೊಂದಿದ್ದರು. ಅದು ಈಗ ಸಾಕಾರಗೊಂಡಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.