ಕೂಪನ್‌ಹೇಗನ್: ಡೆನ್ಮಾರ್ಕ್‌ನ ರಾಣಿ ಎರಡನೇ ಮಾರ್ಗರೇಟ್ (Queen Margrethe II) ಅವರು ತಮ್ಮ ಸ್ಥಾನವನ್ನು ತೊರೆಯುವುದಾಗಿ ಘೋಷಿಸಿದ್ದಾರೆ.
ವಿಶೇಷವೆಂದರೆ ಅವರು ಹೊಸ ವರ್ಷದ ಪ್ರಯುಕ್ತ ಡಿಸೆಂಬರ್ 31ರ ರಾತ್ರಿ 'ನ್ಯಾಷನಲ್ ಡೇ' ಆಚರಣೆ ಸಮಯದಲ್ಲಿ ದೇಶವನ್ನುದ್ದೇಶಿಸಿ ಸರ್ಕಾರಿ ಟಿ.ವಿ ವಾಹಿನಿಯಲ್ಲಿ ಮಾತನಾಡುತ್ತಿದ್ದರು.
'ಇದೇ ಜನವರಿ 14ರಿಂದ ನಾನು ರಾಣಿ ಸ್ಥಾನವನ್ನು ತೊರೆಯುತ್ತಿದ್ದು ತಮ್ಮ ಹಿರಿಯ ಮಗ ರಾಜಕುಮಾರ ಫ್ರೆಡರಿಕ್ ಅವರು ಮುಂದಿನ ರಾಜನಾಗಲಿದ್ದಾರೆ' ಎಂದು ಘೋಷಿಸಿದ್ದಾರೆ.
'ನಾನು ನಿರ್ಗಮಿಸುವ ಸಮಯ ಬಂದಿದೆ. ಹೊಸ ತಲೆಮಾರು ಅಧಿಕಾರ ಹಾಗೂ ಜವಾಬ್ದಾರಿ ವಹಿಸಿಕೊಳ್ಳುವ ಕಾಲ ಇದು' ಎಂದು ರಾಣಿ ಹೇಳಿದ್ದಾರೆ.
ಮಾರ್ಗರೇಟ್ ಅವರು ಕಳೆದ ಫೆಬ್ರುವರಿಯಲ್ಲಿ ಬೆನ್ನುಮೂಳೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 1940 ರಲ್ಲಿ ಜನಿಸಿದ್ದ ಅವರು ತಮ್ಮ ತಂದೆಯ ಉತ್ತರಾಧಿಕಾರಿಯಾಗಿ 1972 ರಲ್ಲಿ ಡೆನ್ಮಾರ್ಕ್ ರಾಣಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಇಂಗ್ಲೆಂಡ್ ರಾಣಿ ದಿವಂಗತ ಎರಡನೇ ಎಲಿಜೆಬೆತ್ ಅವರ ತರುವಾಯ ಮಾರ್ಗರೇಟ್ ಅವರು ಯುರೋಪ್ ಅರಸೊತ್ತಿಗೆಯಲ್ಲಿ ಅತಿ ಹೆಚ್ಚು ಕಾಲ ಆಳ್ವಿಕೆ ನಡೆಸಿದ (52 ವರ್ಷ) ಖ್ಯಾತಿಗೆ ಪಾತ್ರರಾಗಿದ್ದಾರೆ.
ಡೆನ್ಮಾರ್ಕ್‌ನಲ್ಲಿ ಅರಸೊತ್ತಿಗೆ ಜಾರಿಯಲ್ಲಿದ್ದು, ಪ್ರಾತಿನಿಧಿಕ ಪ್ರಜಾಪ್ರಭುತ್ವದ ಮೂಲಕ ಚುನಾಯಿತವಾದ ಸರ್ಕಾರ ಇದೆ. ನ್ಯಾಷನಲ್ ಡೇ ಅನ್ನು ಡೆನ್ಮಾರ್ಕ್ ರಾಜಮನೆತನದವರು ವಿಶೇಷವಾಗಿ ಆಚರಿಸುತ್ತಾರೆ.