ಮುಂಬೈ: ಕಾಂಗ್ರೆಸ್ ಜೊತೆಗೆ ಮುನಿಸಿಕೊಂಡು ಭಾನುವಾರ ಬೆಳಗ್ಗೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಕೇಂದ್ರದ ಮಾಜಿ ಸಚಿವ ಮಿಲಿಂದ್ ದಿಯೋರಾ, ಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಬಣಕ್ಕೆ ಸೇರ್ಪಡೆಯಾಗಿದ್ದಾರೆ.
ದಕ್ಷಿಣ ಮುಂಬೈ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ದಿಯೋರಾ ಮಧ್ಯಾಹ್ನ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ವರ್ಷಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಡಳಿತ ಪಕ್ಷಕ್ಕೆ ಸೇರಿದರು.
ಶಿವಸೇನೆ ಸೇರ್ಪಡೆಯಾದ ನಂತರ ಮಾತನಾಡಿದ ದಿಯೋರಾ, "ಇದು ನನಗೆ ತುಂಬಾ ಭಾವನಾತ್ಮಕ ದಿನವಾಗಿದೆ. ಕಾಂಗ್ರೆಸ್ ತೊರೆಯುತ್ತೇನೆ ಎಂದು ಎಂದಿಗೂ ಯೋಚಿಸಿರಲಿಲ್ಲ. ಆದರೆ, ಇಂದು ಶಿವಸೇನೆಗೆ ಸೇರಿದ್ದೇನೆ ಎಂದು ಹೇಳಿದರು. ಇದಕ್ಕೂ ಮುನ್ನಾ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ದಿಯೋರಾ, ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು.
ಇಂದು ನನ್ನ ರಾಜಕೀಯ ಪಯಣದಲ್ಲಿ ಮಹತ್ವದ ಅಧ್ಯಾಯ ಮುಕ್ತಾಯವಾಗಿದೆ. ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ, ಪಕ್ಷದೊಂದಿಗೆ ನನ್ನ ಕುಟುಂಬದ 55 ವರ್ಷಗಳ ಸಂಬಂಧವನ್ನು ಕೊನೆಗೊಳಿಸಿದ್ದೇನೆ. ಇಷ್ಟು ವರ್ಷಗಳಲ್ಲಿ ನೀಡಿದ ಬೆಂಬಲಕ್ಕಾಗಿ ಅವರ ಎಲ್ಲಾ ನಾಯಕರು, ಸಹೋದ್ಯೋಗಿಗಳು ಮತ್ತು ಕಾರ್ಯಕರ್ತರಿಗೆ ಆಭಾರಿಯಾಗಿದ್ದೇನೆ ಎಂದು ಟ್ವೀಟ್ ನಲ್ಲಿ ಹೇಳಿದ್ದರು.
ದಿಯೋರಾ ಅವರು ಈ ಹಿಂದೆ ಪ್ರತಿನಿಧಿಸಿದ್ದ ದಕ್ಷಿಣ ಮುಂಬೈ ಲೋಕಸಭಾ ಸ್ಥಾನದಿಂದ ಸ್ಪರ್ಧಿಸುವುದಾಗಿ ಶಿವಸೇನೆ-ಯುಬಿಟಿ ಹೇಳಿದ ಕಳೆದ ಕೆಲವು ದಿನಗಳಿಂದ ದಿಯೋರಾ ಅಸಮಾಧಾನಗೊಂಡಿದ್ದರು. 2014 ಮತ್ತು 2019 ರ ಲೋಕಸಭಾ ಚುನಾವಣೆಯಲ್ಲಿ ಅವರು ಅವಿಭಜಿತ ಶಿವಸೇನೆಯ ಅರವಿಂದ್ ಸಾವಂತ್ ಅವರಿಂದ ಸೋತಿದ್ದರು. ಈಗ ವಿರೋಧ ಪಕ್ಷಗಳ ಮೈತ್ರಿಕೂಟವಾದ ಮಹಾ ವಿಕಾಸ್ ಅಘಾಡಿ ವೇದಿಕೆಯಲ್ಲಿ ಕಾಂಗ್ರೆಸ್ ಮತ್ತು ಎನ್ ಸಿಪಿ ಶರದ್ ಪವಾರ್ ಬಣ ಮೈತ್ರಿ ಮಾಡಿಕೊಂಡಿವೆ.