ಶ್ರೀನಗರ: 'ಕೇಂದ್ರ ಸರ್ಕಾರವು ಈಶಾನ್ಯ ಭಾರತದಲ್ಲಿ ಭಯೋತ್ಪಾದಕರೊಂದಿಗೆ ಶಾಂತಿ ಮಾತುಕತೆ ನಡೆಸುತ್ತಿದೆ. ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ (ಜೆಕೆ) ಸಾಮಾನ್ಯ ನಾಗರಿಕರನ್ನು ಭಯೋತ್ಪಾದಕರಂತೆ ನಡೆಸಿಕೊಳ್ಳುತ್ತಿದೆ' ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಭಾನುವಾರ ವಾಗ್ದಾಳಿ ನಡೆಸಿದ್ದಾರೆ.
ಶ್ರೀನಗರ: 'ಕೇಂದ್ರ ಸರ್ಕಾರವು ಈಶಾನ್ಯ ಭಾರತದಲ್ಲಿ ಭಯೋತ್ಪಾದಕರೊಂದಿಗೆ ಶಾಂತಿ ಮಾತುಕತೆ ನಡೆಸುತ್ತಿದೆ. ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ (ಜೆಕೆ) ಸಾಮಾನ್ಯ ನಾಗರಿಕರನ್ನು ಭಯೋತ್ಪಾದಕರಂತೆ ನಡೆಸಿಕೊಳ್ಳುತ್ತಿದೆ' ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಭಾನುವಾರ ವಾಗ್ದಾಳಿ ನಡೆಸಿದ್ದಾರೆ.
ಪಿಡಿಪಿ ಸಂಸ್ಥಾಪಕ ಮತ್ತು ತಮ್ಮ ತಂದೆ ಮುಫ್ತಿ ಮೊಹಮ್ಮದ್ ಸಯೀದ್ ಅವರ ಎಂಟನೇ ಪುಣ್ಯತಿಥಿಯಂದು ಅನಂತನಾಗ್ ಜಿಲ್ಲೆಯ ಬಿಜ್‌ಬೆಹರಾದಲ್ಲಿ ಅವರ ಸಮಾಧಿ ಬಳಿ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರ ಸಭೆ ಉದ್ದೇಶಿಸಿ ಮೆಹಬೂಬಾ ಮಾತನಾಡಿದರು.
'ನಾವು ಶರಣಾಗುವುದಿಲ್ಲ, ನಾವು ಬಿಳಿ ಬಾವುಟ ಹಾರಿಸುವುದಿಲ್ಲ. ನೀವು ನಮ್ಮೊಂದಿಗೆ ಘನತೆಯಿಂದ ಮಾತನಾಡಿದರೆ, ನಾವು ಗೌರವದಿಂದ ಪ್ರತಿಕ್ರಿಯಿಸುತ್ತೇವೆ. ಆದರೆ, ನೀವು ಬಫ್ಲಿಯಾಜ್‌ನಲ್ಲಿ ಮಾಡಿದಂತೆ, ನೀವು ಲಾಠಿಗಳ ಮೂಲಕ ಮಾತನಾಡಿದರೆ ಅದು ಫಲಿಸುವುದಿಲ್ಲ' ಎಂದು ಹೇಳಿದರು.
'ಈಶಾನ್ಯ ರಾಜ್ಯಗಳಲ್ಲಿ ನೀವು ಉಗ್ರಗಾಮಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದೀರಿ. ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಜನಸಾಮಾನ್ಯರಿಗೆ ಉಗ್ರಗಾಮಿಗಳ ಹಣೆಪಟ್ಟಿ ಹಚ್ಚಿದ್ದೀರಿ. ವಿವೇಚನಾರಹಿತವಾಗಿ ಜನರನ್ನು ಬಂಧಿಸಿ ಜೈಲುಗಳನ್ನು ಭರ್ತಿ ಮಾಡಿದ್ದೀರಿ. ಜಾರಿ ನಿರ್ದೇಶನಾಲಯ, ಎನ್‌ಐಎ, ಎಸ್‌ಐಎ ಮೂಲಕ ದಾಳಿಗಳನ್ನು ನಡೆಸಿ, ತಮ್ಮದೇ ಜನರನ್ನು ಹೀಗೆ ಯಾರಾದರೂ ನಡೆಸಿಕೊಳ್ಳುತ್ತಾರೆಯೇ' ಎಂದು ಮೆಹಬೂಬಾ ಪ್ರಶ್ನಿಸಿದರು.
'ಪ್ರತ್ಯೇಕತಾವಾದಿಗಳೊಂದಿಗೆ ವ್ಯವಹರಿಸುವಲ್ಲಿ ತಮ್ಮ ತಂದೆ ಸಯೀದ್ ಅವರು ಅನುಸರಿಸಿದ ವಿಧಾನದಿಂದ ಕೇಂದ್ರ ಸರ್ಕಾರ ಕಲಿಯಬೇಕಿದೆ. ತಮ್ಮ ತಂದೆ ಜನರ ಹೃದಯ ಬೆಸೆಯಲು ಪ್ರಯತ್ನಿಸಿದರು. ಅವರು ಪ್ರತ್ಯೇಕತಾವಾದಿಗಳಿಗೂ ಈ ದೇಶದೊಳಗೆ ಘನತೆಯಿಂದ ಬದುಕಲು ದಾರಿ ಮಾಡಿಕೊಟ್ಟಿದ್ದರು. ಜಮ್ಮು ಮತ್ತು ಕಾಶ್ಮೀರದ ಜನರು ಘನತೆ, ಶಾಂತಿ ಬಯಸುತ್ತಾರೆ ಎಂದು ಹೇಳಿದ್ದರು. ಅವರು ಎಂದಿಗೂ ಸಲ್ಲದ್ದನ್ನು ಹೇಳಲಿಲ್ಲ' ಎಂದು ಮೆಹಬೂಬಾ ಸ್ಮರಿಸಿದರು.
ಪಿಡಿಪಿ ಸಹ-ಸಂಸ್ಥಾಪಕ ಮುಜಾಫರ್ ಹುಸೇನ್ ಬೇಗ್ ಮತ್ತು ಅವರ ಪತ್ನಿ, ಬಾರಾಮುಲ್ಲಾ ಜಿಲ್ಲಾ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ ಸಫೀನಾ ಬೇಗ್ ಅವರು ನಾಲ್ಕು ವರ್ಷಗಳ ನಂತರ ಪಿಡಿಪಿಗೆ ಮರಳಿದ್ದು, ಈ ಸಭೆಯಲ್ಲಿ ಪಕ್ಷ ಸೇರಿದರು.