ನವದೆಹಲಿ: ವಾಟ್ಸ್‌ಆಯಪ್‌ನಲ್ಲಿ ನಡೆಯುವ ವಿವಿಧ ರೀತಿಯ ವಂಚನೆಗಳ ಬಗ್ಗೆ ಬಳಕೆದಾರರು ಜಾಗರೂಕರಾಗಿರುವಂತೆ ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಪೋಲಿಸ್ ಚಿಂತಕರ ಚಾವಡಿ ಎಚ್ಚರಿಕೆ ನೀಡಿದೆ.
ಹೂಡಿಕೆ ಯೋಜನೆಗಳ ಹೆಸರಿನಲ್ಲಿ, ಉದ್ಯೋಗ ನೀಡುವ ಆಮಿಷವೊಡ್ಡಿ ಜನರಿಗೆ ಮೋಸ ಮಾಡಲಾಗುತ್ತಿದೆ.
ವಂಚಕರು ಜನರ ವಾಟ್ಸ್‌ಆಯಪ್ ಖಾತೆಗಳಿಗೆ ಅನಧಿಕೃತವಾಗಿ ಪ್ರವೇಶ ಪಡೆದು (ಹೈಜಾಕ್ ಮಾಡಿ) ಅವರ 'ಕಾಂಟ್ಯಾಕ್ಟ್'ನಲ್ಲಿರುವ ವ್ಯಕ್ತಿಗಳನ್ನು ಸಂಪರ್ಕಿಸಿ ಹಣ ನೀಡುವಂತೆ ಮನವಿ ಮಾಡುತ್ತಾರೆ. ವಾಟ್ಸ್‌ಆಯಪ್‌ಗೆ ಮಾಡಿದ ಬೆತ್ತಲೆ ವಿಡಿಯೊ ಕಾಲ್ ಅನ್ನು ಬಹಿರಂಗಗೊಳಿಸುವ ಬೆದರಿಕೆಯೊಡ್ಡಿಯೂ ಹಣಕ್ಕೆ ಬೇಡಿಕೆ ಇಡುತ್ತಾರೆ ಎಂದು ಹೇಳಿದೆ.
ವಿಯೆಟ್ನಾಂ, ಕೆನ್ಯಾ, ಇಥಿಯೋಪಿಯಾ ಮತ್ತು ಮಲೇಷ್ಯಾ ದೇಶಗಳ ಕೋಡ್‌ಗಳನ್ನು ಬಳಸಿ ಹ್ಯಾಕರ್‌ಗಳು ಮಿಸ್ಡ್ ಕಾಲ್ ಮಾಡುತ್ತಾರೆ. ಹಾಗಾಗಿ ಈ ದೇಶಗಳ ಕೋಡ್ ಹೊಂದಿರುವ ಸಂಖ್ಯೆಯ ದೂರವಾಣಿ ಕರೆಗಳನ್ನು ಸ್ವೀಕರಿಸಬಾರದು. ಸಕ್ರಿಯ ಬಳಕೆದಾರರನ್ನು ಗುರುತಿಸಲು ಹ್ಯಾಕರ್‌ಗಳು 'ಕೋಡ್ ಸ್ಕ್ರಿಪ್ಟೆಡ್ ಬಾಟ್'ಗಳನ್ನು ಬಳಸುತ್ತಾರೆ ಎಂದೂ ವಿವರಿಸಿದೆ.
ಕಂಪನಿಗಳ ಸಿಇಒ, ಮುಖ್ಯ ಹಣಕಾಸು ಅಧಿಕಾರಿ, ಬ್ಯಾಂಕ್ ಅಧಿಕಾರಿ, ಪೊಲೀಸ್ ಅಥವಾ ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ವಂಚಕರು ಬಳಕೆದಾರರಿಗೆ ಕರೆ ಮಾಡುತ್ತಾರೆ ಎಂದಿದೆ.
ಗ್ರಾಹಕರ ಖಾಸಗಿ ಮಾಹಿತಿಗಳನ್ನು ಪಡೆದು ಅವರ ಸಾಮಾಜಿಕ ಜಾಲತಾಣಗಳಲ್ಲಿರುವ ಖಾತೆಯನ್ನು ಹೋಲುವ ಬೇರೆ ಖಾತೆಗಳನ್ನು ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಡುತ್ತಾರೆ ಎಂದಿರುವ ಬಿಪಿಆರ್‌ಡಿ, ವಾಟ್ಸ್‌ಆಯಪ್ ಈಚೆಗೆ ಪರಿಚರಿಸಿರುವ ಸ್ಕ್ರೀನ್ ಶೇರಿಂಗ್ ಫೀಚರ್ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
'ಮೆಟಾ' ಒಡೆತನದ ವಾಟ್ಸ್‌ಆಯಪ್ ತನ್ನ ಬಳಕೆದಾರರಿಗಾಗಿ ಹಲವು ಸುರಕ್ಷತಾ ಫೀಚರ್‌ಗಳನ್ನು ಈಗಾಗಲೇ ಪರಿಚಯಿಸಿದೆ. ಅಲ್ಲದೆ ಇಂತಹ ವಂಚನೆಗಳ ಬಗ್ಗೆ ಜಾಗೃತಿಯನ್ನೂ ಮೂಡಿಸುತ್ತಿದೆ.
ಎಚ್ಚರಿಕೆ ಕ್ರಮ
* ವಾಟ್ಸ್‌ಆಯಪ್ ಖಾತೆಯಲ್ಲಿ ಎರಡು ಹಂತದ ದೃಢೀಕರಣವನ್ನು ಸಕ್ರಿಯಗೊಳಿಸಬೇಕು
* ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಗಳನ್ನು ಸ್ವೀಕರಿಸಬಾರದು
* ಆ ಸಂಖ್ಯೆಗಳನ್ನು ಬ್ಲಾಕ್ ಮಾಡಬೇಕು