ನವದೆಹಲಿ: ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) 150ನೇ ವರ್ಷವನ್ನು ಆಚರಿಸುತ್ತಿದೆ. ಈ ಪ್ರಯುಕ್ತ ಹವಾಮಾನ ಮುನ್ಸೂಚನೆಯನ್ನು ಇನ್ನಷ್ಟು ನಿಖರವಾಗಿ ನೀಡಲು ಹೊಸ ತಂತ್ರಜ್ಞಾನಗಳ ಮೊರೆಹೋಗುವ ಬಗ್ಗೆ ಚಿಂತನೆ ನಡೆಸಿದೆ.
'ಹವಾಮಾನ ಮುನ್ಸೂಚನೆ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ, ಮೆಷಿನ್ ಲರ್ನಿಂಗ್ (ಎಂಎಲ್) ಮತ್ತು ಕ್ಷಿಪ್ರವಾಗಿ ಕಾರ್ಯನಿರ್ವಹಿಸುವ ಸೂಪರ್ ಕಂಪ್ಯೂಟರ್‌ಗಳನ್ನು ಬಳಸಲು ಯೋಜನೆ ರೂಪಿಸಲಾಗಿದೆ' ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಪಾತ್ರ ಅವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಚಂಡಮಾರುತಗಳ ರೂಪುಗೊಳ್ಳುವಿಕೆ ಮತ್ತು ಭಾರಿ ಮಳೆಗೆ ಕಾರಣವಾಗುವ ಅಂಶಗಳನ್ನು ಅರ್ಥಮಾಡಿಕೊಳ್ಳಲು ಒಡಿಶಾ ಮತ್ತು ಮಧ್ಯಪ್ರದೇಶದಲ್ಲಿ ಅತ್ಯಾಧುನಿಕ ವ್ಯವಸ್ಥೆಯನ್ನು ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದರು.
ಡಿಸೆಂಬರ್‌ನಲ್ಲಿ ದಕ್ಷಿಣ ತಮಿಳುನಾಡಿನಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಲು ವಿಫಲವಾದದ್ದಕ್ಕೆ ಟೀಕೆ ಎದುರಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ನಾವು ಪಾಠಗಳನ್ನು ಕಲಿಯಲು ಮತ್ತು ಹವಾಮಾನ ಮುನ್ಸೂಚನೆ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಇಂತಹ ಟೀಕೆಗಳು ಇರಬೇಕು' ಎಂದರು.
'ಸಣ್ಣ ಮಟ್ಟದಲ್ಲಿ ಆಗುವ ಹವಾಮಾನದ ವಿಪರೀತ ಏರಿಳಿತದ ವಿದ್ಯಮಾನಗಳ ಮುನ್ಸೂಚನೆ ನೀಡುವುದು ದೊಡ್ಡ ಸವಾಲಾಗಿದೆ. ಈಗ ನಮ್ಮಲ್ಲಿರುವ ವ್ಯವಸ್ಥೆಯು ಮೇಘಸ್ಫೋಟ ಹಾಗೂ ಅಲ್ಪ ಅವಧಿಯಲ್ಲಿ 60 ಸೆಂ.ಮೀ. ನಿಂದ 90 ಸೆಂ.ಮೀ. ನಷ್ಟು ಮಳೆಯಾಗುವ ಮುನ್ಸೂಚನೆ ನೀಡಲು ಸಮರ್ಥವಾಗಿಲ್ಲ' ಎಂದು ಹೇಳಿದರು.
ಸಂಭ್ರಮಾಚರಣೆಗೆ ನಾಳೆ ಚಾಲನೆ
150ನೇ ವರ್ಷಾಚರಣೆ ಅಂಗವಾಗಿ ಐಎಂಡಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 'ಪಂಚಾಯತ್ ಮೌಸಮ್ ಸೇವೆ'ಯನ್ನು ಜಾರಿಗೊಳಿಸುವ ಮೂಲಕ ಸಂಭ್ರಮಾಚರಣೆಗೆ ಸೋಮವಾರ ಚಾಲನೆ ನೀಡಲಿದೆ. ಪ್ರತಿ ಗ್ರಾಮದ ರೈತರಿಗೆ ಹವಾಮಾನ ಮುನ್ಸೂಚನೆ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.
'ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ ಕೋಲ್ಕತ್ತದ ಬಂದರಿನಲ್ಲಿ ಚಂಡಮಾರುತದ ಮುನ್ಸೂಚನೆ ನೀಡುವುದರಿಂದ ಹಿಡಿದು, ಇಂದು ಪ್ರತಿಯೊಬ್ಬರ ಮೊಬೈಲ್ ಫೋನ್‌ಗಳಿಗೆ ಹವಾಮಾನ ಮುನ್ಸೂಚನೆಯ ಸಂದೇಶ ತಲುಪಿಸುವುದರವರೆಗೆ ಐಎಂಡಿ ಬಲು ದೂರ ಸಾಗಿ ಬಂದಿದೆ' ಎಂದು ಅವರು ತಿಳಿಸಿದರು.