ಕಾಸರಗೋಡು: ನ್ಯಾಯಾಧೀಶನೆಂದು ತಿಳಿಸಿ ಪೊಲೀಸರನ್ನೇ ಯಾಮಾರಿಸಲೆತ್ನಿಸಿದ ಹಲವು ಪ್ರಕರಣಗಳ ಆರೋಪಿ, ತಿರುವನಂತಪುರ ತೇನ್ನಲ ನಿವಾಸಿ ಶಮ್ನಾದ್(42)ಎಂಬಾತನನ್ನು ನೀಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪೊಲಿಸ್ ಇಲಾಖೆಯ ಡಿಸಿಆರ್‍ಬಿ ವಿಭಾಗದಿಂದ ಕರೆಮಾಡುತ್ತಿರುವುದಾಗಿ ತಿಳಿಸಿ ನೀಲೇಶ್ವರ ಪೊಲೀಸ್ ಠಾಣೆಗೆ ತಡರಾತ್ರಿ ಕರೆಯೊಂದು ಬಂದಿದ್ದು, ಪತ್ತನಂತಿಟ್ಟ ಜಿಲ್ಲಾ ನ್ಯಾಯಾಧೀಶರ ಕಾರು ಪ್ರಯಾಣದ ಮಧ್ಯೆ ನೀಲೇಶ್ವರ ಆಸುಪಾಸು ರಸ್ತೆಯಲ್ಲಿ ಕೆಟ್ಟು ನಿಂತಿದ್ದು, ತಕ್ಷಣ ಇವರಿಗೆ ಬದಲಿ ವ್ಯವಸ್ಥೆ ಮಾಡಿಕೊಡುವಂತೆ ತಿಳಿಸಲಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲಿಸರು ನೀಲೇಶ್ವರ ರಾಷ್ಟ್ರೀಯ ಹೆದ್ದಾರಿ ಬಳಿ ತೆರಳಿದಾಗ ಕಾರಿನಬಳಿ ವ್ಯಕ್ತಿಯೊಬ್ಬ ನಿಂತಿದ್ದು, ಪೊಲಿಸರು ವಿಚಾರಿಸಿದಾಗ ತಾನು ಪತ್ತನಂತಿಟ್ಟ ಮ್ಯಾಜಿಸ್ಟ್ರೇಟ್ ಆಗಿದ್ದು, ರಾತ್ರಿ ತಂಗಲು ವ್ಯವಸ್ಥೆಮಾಡಿಕೊಡುವಂತೆ ಕೇಳಿಕೊಂಡಿದ್ದಾನೆ. ಪೊಲಿಸರು ಈತನನ್ನು ಉತ್ತಮ ಸೌಕರ್ಯ ಹೊಂದಿರುವ ಹೋಟೆಲ್ ಒಂದಕ್ಕೆ ಸಾಗಿಸಿದ್ದಾರೆ. ಅಲ್ಲಿ ವ್ಯವಸ್ಥೆ ಸರಿಯಿಲ್ಲ, ತನ್ನನ್ನು ಕಣ್ಣೂರು ರೈಲ್ವೆ ನಿಲ್ದಾಣಕ್ಕೆ ಕಾರಿನಲ್ಲಿ ತಲುಪಿಸುವಂತೆ ಪೊಲೀಸರಿಗೆ ತಿಳಿಸಿದ್ದಾನೆ. ಕಣ್ಣೂರಿಗೆ ತಲುಪಿಸುವುದು ಸಾಧ್ಯವಾಗದು, ಹೊಸದುರ್ಗ ರೈಲ್ವೆ ನಿಲ್ದಾಣಕ್ಕೆ ತಲುಪಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಮಧ್ಯೆ ಈತನ ವರ್ತನೆಯಲ್ಲಿ ಸಂಶಯ ಕಂಡುಕೊಂಡ ಪೊಲೀಸರು ಈತನ ಗುರುತಿನ ಪತ್ರ ತೋರಿಸುವಂತೆ ತಿಳಿಸಿದ್ದಾರೆ. ಇದರಿಂದ ತಬ್ಬಿಬ್ಬಾದ ಆರೋಪಿ ನುಣುಚಿಕೊಳ್ಳಲು ಯತ್ನಿಸಿದ್ದಾನೆ. ಇದರಿಂದ ಈತನನ್ನು ಮತ್ತಷ್ಟು ವಿಚಾರಣೆಗೊಳಪಡಿಸಿದಾಗ ತಾನು ತಿರುವನಂತಪುರ ನಿವಾಸಿ ಶಮ್ನಾದ್ ಎಂಬುದಾಗಿ ಗುರುತು ತಿಳಿಸಿದ್ದಾನೆ. ಈತನ ವಿರುದ್ಧ ನಕಲಿ ನೋಟು ಚಲಾವಣೆ ಸೇರಿದಂತೆ ಒಂಬತ್ತು ಪ್ರಕರಣ ದಾಖಲಾಗಿರುವುದಾಗಿ ಪೊಲಿಸರು ತಿಳಿಸಿದ್ದಾರೆ.