ಅಯೋಧ್ಯೆ: ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆಯಾದ ಬಾಲರಾಮನ ದರ್ಶನಕ್ಕೆ ಇಂದು (ಜ.24) ಕೂಡ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಮೈಕೊರೆಯುವ ಚಳಿಯಲ್ಲೂ ಮುಂಜಾನೆಯಿಂದಲೇ ಜನ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯಗಳನ್ನು ಎಎನ್‌ಐ ಸುದ್ದಿ ಸಂಸ್ಥೆ ಎಕ್ಸ್‌ನಲ್ಲಿ ಹಂಚಿಕೊಂಡಿದೆ.

'ಹೆಚ್ಚು ಜನಸಂದಣಿಯಿದೆ. ಭದ್ರತೆಗೆ ಅಗತ್ಯವಿರುವ ಸಿದ್ಧತೆಗಳು ಪೂರ್ಣಗೊಂಡಿವೆ. ಆದರೂ ವೃದ್ಧರು ಮತ್ತು ದಿವ್ಯಾಂಗರಿಗೆ ಎರಡು ವಾರಗಳ ನಂತರ ದೇವಾಲಯಕ್ಕೆ ಭೇಟಿ ನೀಡಬೇಕೆಂದು ನಾವು ಮನವಿ ಮಾಡುತ್ತೇವೆ. ದರ್ಶನಕ್ಕಾಗಿ ಆತುರಪಡುವ ಅಗತ್ಯವಿಲ್ಲ. ಉತ್ತಮ ಸಿದ್ಧತೆಗಳೊಂದಿಗೆ ಎಲ್ಲರಿಗೂ ದೇವಾಲಯಕ್ಕೆ ಪ್ರವೇಶಿಸುವ ವ್ಯವಸ್ಥೆ ಮಾಡಲಾಗುವುದು' ಎಂದು ಹೆಚ್ಚುವರಿ ಡಿಜಿಪಿ ಪ್ರಶಾಂತ್ ಕುಮಾರ್ ಹೇಳಿದ್ದಾರೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಸುಮಾರು 1,000 ರ್‍ಯಾಪಿಡ್ ಆಕ್ಷನ್ ಫೋರ್ಸ್ (RAF) ಸಿಬ್ಬಂದಿಯನ್ನು ದೇವಾಲಯದ ಸಂಕೀರ್ಣದಲ್ಲಿ ಮತ್ತು ಸುತ್ತಲೂ ನಿಯೋಜಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಒಂದೇ ದಿನ 5 ಲಕ್ಷ ಜನರ ಭೇಟಿ
ಜ.22ರಂದು ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನಡೆದ ನಂತರ ಜ.23 ರಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಇದರಿಂದಾಗಿ ಒಂದೇ ದಿನ ಐದು ಲಕ್ಷಕ್ಕೂ ಹೆಚ್ಚು ಭಕ್ತರು ರಾಮ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಇದರಿಂದಾಗಿ ರಾಮ ಜನ್ಮಭೂಮಿ ಸಂಕೀರ್ಣದಲ್ಲಿ ಭಾರೀ ಜನಸ್ತೋಮ ನೆರೆದಿತ್ತು. ಅಲ್ಲದೆ ನೂಕುನುಗ್ಗಲು ಉಂಟಾಗಿತ್ತು. ಜನರನ್ನು ಸಂಭಾಳಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.