ಕಾಸರಗೋಡು: ಯುವಕನ ಕಿರುಕುಳದಿಂದ ಬೇಸತ್ತು ವಿದ್ಯಾರ್ಥಿನಿ ಇಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೊಗ್ರಾಲ್ ಕೋಟಕುನ್ನು ನಿವಾಸಿ ಅನ್ವರ್(24)ಎಂಬಾತನನ್ನು ಬದಿಯಡ್ಕ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತನ್ನೊಂದಿಗೆ ಪ್ರೀತಿ ಮುಂದುವರಿಸದಿದ್ದಲ್ಲಿ ತಂದೆಯನ್ನು ಕೊಲ್ಲುವುದಾಗಿ ಯುವಕ ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿ ಇಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಳು.
ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಹದಿನಾರರ ಹರೆಯದ ಬಾಲಕಿ ಚಿಕಿತ್ಸೆಯಲ್ಲಿರುವವಳು. ವಿಷಯ ಬಹಿರಂಗಗೊಳ್ಳುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದು, ಪೊಲೀಸರು ನಡೆಸಿದ ಹುಡುಕಾಟದಿಂದ ಈತನನ್ನು ಬಂಧಿಸಲಾಗಿದೆ. ಮೊಗ್ರಾಲ್ ಕೋಟೆಕುನ್ನು ನಿವಾಸಿಯಾಗಿರುವ ಯುವಕನನ್ನು ಸಾಮಾಜಿಕ ಜಾಲತಾಣದ ಮೂಲಕ ಪರಿಚಯಗೊಂಡಿದ್ದು, ನಂತರ ಯುವಕ ಬಾಲಕಿಯೊಂದಿಗೆ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದನೆನ್ನಲಾಗಿದೆ. ಈ ವಿಷಯ ಬಾಲಕಿ ಮನೆಯವರಿಗೆ ತಿಳಿಯುತ್ತಿದ್ದಂತೆ, ಹೆತ್ತವರು ಬುದ್ಧಿಮಾತು ಹೇಳಿ ಯುವಕನ ಜತೆಗಿನ ಸಂಪರ್ಕ ಕಡಿದುಕೊಳ್ಳುವಂತೆ ಮಾಡಿದ್ದರು. ನಂತರ ಬಾಲಕಿಯೂ ಈತನ ಮೊಬೈಲ್ ಸಂಖ್ಯೆ ಬ್ಲಾಕ್ ಮಾಡಿದ್ದಳು. ನಂತರ ಶಾಲೆಗೆ ತೆರಳುತ್ತಿದ್ದ ಬಾಲಕಿಯನ್ನು ಯುವಕ ಹಿಂಬಾಲಿಸಿರುವುದಲ್ಲದೆ, ಪ್ರೀತಿ ಮುಂದುವರಿಸದಿದ್ದಲ್ಲಿ, ತಂದೆಯನ್ನು ಕೊಲೆಗೈಯುವುದಾಗಿ ಬೆದರಿಕೆಯೊಡ್ಡಿದ್ದನು. ಇದರಿಂದ ಬೆದರಿದ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆನ್ನಲಾಗಿದೆ.