ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲು ಕಳೆದ ಕೆಲವು ತಿಂಗಳುಗಳಿಂದ ಕೆತ್ತಲಾಗುತ್ತಿರುವ ಮೂರು ರಾಮಲಲ್ಲಾ ವಿಗ್ರಹಗಳಲ್ಲಿ ಇನ್ನೂ ಯಾವುದನ್ನು ಆಯ್ಕೆ ಮಾಡಿಲ್ಲ ಎಂದು ರಾಮ ಮಂದಿರ ಟ್ರಸ್ಟ್‌ಗೆ ಸಂಬಂಧಿಸಿದವರು ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
ನಿನ್ನೆಯಷ್ಟೇ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಆರ್ ಅಶೋಕ್, ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸೇರಿದಂತೆ ಹಲವು ಬಿಜೆಪಿ ನಾಯಕರು ರಾಜ್ಯದ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿದ ವಿಗ್ರಹವನ್ನು ಅಯೋಧ್ಯೆಯ ಹೊಸ ದೇವಾಲಯದಲ್ಲಿ ಪ್ರತಿಷ್ಠಾಪಿಸಲು ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದರು ಮತ್ತು ಶಿಲ್ಪಿ ಅರುಣ್ ಅವರನ್ನು ಅಭಿನಂದಿಸಿದ್ದರು.
ಆದರೆ ಮಂದಿರ ನಿರ್ಮಾಣ ಮಾಡುತ್ತಿರುವ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ರಾಮಲಲ್ಲಾ ವಿಗ್ರಹ ಆಯ್ಕೆ ಸಂಬಂಧ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದೆ.
ಈ ಸಂಬಂಧ ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ ಮತ್ತು ಇತರ ದರ್ಶಿಗಳೊಂದಿಗೆ ಸಮಾಲೋಚಿಸಿ ಟ್ರಸ್ಟ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದ್ದಾರೆ.
ಟ್ರಸ್ಟ್ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದನ್ನು ಸೂಕ್ತ ಸಮಯದಲ್ಲಿ ಸಾರ್ವಜನಿಕವಾಗಿ ಪ್ರಕಟಿಸಲಾಗುವುದು ಎಂದು ಟ್ರಸ್ಟ್‌ನ ಕಚೇರಿ ಉಸ್ತುವಾರಿ ಪ್ರಕಾಶ್ ಗುಪ್ತಾ ಅವರು ಹೇಳಿದ್ದಾರೆ.
ಅಯೋಧ್ಯೆಯ ರಾಮ ಮಂದಿರದಲ್ಲಿ ಭಗವಾನ್ ಶ್ರೀರಾಮನ 5 ವರ್ಷ ಮಗುವಿನ ರೂಪದ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ರಾಮನ ಈ ವಿಶೇಷ ಮೂರ್ತಿಯನ್ನು ಈಗಾಗಲೇ ಮೂರು ಜನ ಪರಿಣಿತವುಳ್ಳ ಶಿಲ್ಪಿಗಳು ತಯಾರಿಸಲಾಗಿದ್ದು, ರಾಮ ಮಂದಿರ ಟ್ರಸ್ಟ್ ಈ ಮೂರು ವಿಗ್ರಹಗಳಲ್ಲಿ ಒಂದನ್ನು ಆಯ್ಕೆ ಮಾಡುತ್ತದೆ.