ಕುಂಬಳೆ: ಕೇರಳ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಕೊಡಮಾಡುವ ಅತ್ಯುನ್ನತ ಬಾರ್ ಟು ಮೆಡಲ್ ಆಫ್ ಮೆರಿಟ್ ಪ್ರಶಸ್ತಿಗೆ ನಿವೃತ್ತ ಶಿಕ್ಷಕಿ ಭಾರ್ಗವಿ ಕೋರೋತ್ ಆಯ್ಕೆಯಾಗಿದ್ದಾರೆ. ಇವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಈ ವಿಶೇಷ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.ಕಳೆದ ಮೂವತ್ತು ವರ್ಷಗಳಿಂದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಲ್ಲಿ ಸಕ್ರಿಯವಾಗಿದ್ದು ಇದೀಗ ಕಾಸರಗೋಡು ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಎಸೋಶಿಯೇಶನ್ ನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕಾಸರಗೋಡು ಜಿಲ್ಲಾ ಜೊತೆಕಾರ್ಯದರ್ಶಿ, ಜಿಲ್ಲಾ ಓರ್ಗನೈಸಿಂಗ್ ಕಮಿಷನರ್,ಜಿಲ್ಲಾ ಕಮಿಷನರ್,ಕೇರಳ ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್ ನ ಸಹಾಯಕ ಕಮಿಷನರ್ ಸ್ಥಾನಗಳಲ್ಲಿ ಸೇವೆಸಲ್ಲಿಸಿದ ಅನುಭವ ಇವರಿಗಿದೆ.1995ರಲ್ಲಿ ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆಯಲ್ಲಿ ಗೈಡ್ ದಳವನ್ನು ಸ್ಥಾಪಿಸಿದ್ದರು.ಸ್ಕೌಟ್ಸ್ ಮತ್ತು ಗೈಡ್ಸಿನ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಕ್ಕಳನ್ನು ಮುನ್ನಡೆಸಿದ ಕೀರ್ತಿ ಇವರಿಗಿದೆ.
ಸರ್ಕಾರಿ ಕಾಲೇಜು ಕಾಸರಗೋಡಿನಲ್ಲಿ ನಡೆದ ರಾಜ್ಯ ಮಟ್ಟದ ಕಬ್ ಬುಲ್ ಬುಲ್ ಉತ್ಸವ, ರಾಜ್ಯ ಮಟ್ಟದ ರೋವರ್ಸ್ ರೇಂಜರ್ಸ್ ಅಡ್ವೆಂಚರ್ ಕ್ಯಾಂಪಿನ ಜವಾಬ್ದಾರಿಯನ್ನು ವಹಿಸಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದರು.ಜನರಲ್ ಕನ್ವೀನರ್ ಸ್ಥಾನದಲ್ಲಿದ್ದುಕೊಂಡು ಕಾಸರಗೋಡಿನ ನಾಲ್ಕು ಮಂದಿ ಬಡ ಮಕ್ಕಳಿಗೆ ಮನೆ ನಿರ್ಮಿಸಿ ಕೊಟ್ಟ ಸ್ನೇಹ ಭವನ ಯೋಜನೆಯನ್ನೂ ಪೂರ್ತಿಗೊಳಿಸಿದ ಹಿರಿಮೆ ಭಾರ್ಗವಿ ಅವರಿಗಿದೆ.ಕುಟುಂಬಶ್ರೀಯ ಪ್ರಾಯೋಜಕತ್ವದಲ್ಲಿ ನಡೆಯುವ ಅನ್ನಪೂರ್ಣ ಕ್ಯಾಟರಿಂಗ್ ಯೋಜನೆಯ ಚುಕ್ಕಾಣಿ ಹಿಡಿದು ಹತ್ತಾರು ಮಂದಿಯ ಜೀವನಾಧಾರಕ್ಕೆ ಕಾರಣ ಕರ್ತರಾಗಿದ್ದಾರೆ.
ಸೇವೆಯಲ್ಲಿರುವಾಗ ವೃತ್ತಿ ಪರಿಚಯ ಜಿಲ್ಲಾ ಕ್ಲಬ್ ಅಸೋಸಿಯೇಶನ್ ನ ಕಾರ್ಯದರ್ಶಿ,ರಾಜ್ಯ ಸಹ ಕಾರ್ಯದರ್ಶಿ ಹಾಗೂ ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಹಿರಿಮೆ ಇವರಿಗಿದೆ.2018ರಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ನ ಅಂತಾರಾಷ್ಟ್ರೀಯ ಪುರಸ್ಕಾರವೂ ಇವರಿಗೆ ಲಭಿಸಿತ್ತು.
ಹಿಮಾಲಯ ವುಡ್ ಬ್ಯಾಡ್ಜ್ ಪಡೆದಿರುವ ಭಾರ್ಗವಿ ಟೀಚರ್ ನಿವೃತ್ತಿಯ ನಂತರ ಇರಿಯಣ್ಣಿ ಶಾಲೆಯಲ್ಲಿ ಓಪನ್ ಗೈಡ್ ಕಂಪೆನಿಯ ನಾಯಕತ್ವ ವಹಿಸುತ್ತಿದ್ದಾರೆ.ಹಿರಿಯ ಮಗ ಉಣ್ಣಿ ಕೋರೋತ್ ಬೆಂಗಳೂರಿನ ವಾಟ್ ಫಿಕ್ಸ್ ಕಂಪೆನಿಯ ಡೈರೆಕ್ಟರ್ ಆದರೆ ಕಿರಿಯವನಾದ ನಿತಿನ್ ಕೋರೋತ್ ದುಬಾಯಿಯ ಅಲ್ ಶಿರಾವಿ ಗ್ರೂಪ್ ಆಫ್ ಕಂಪೆನಿಯಲ್ಲಿ ಜನರಲ್ ಮೆನೇಜರ್ ಹುದ್ದೆಯಲ್ಲಿದ್ದಾರೆ. ಇವರ ಇಬ್ಬರು ಸೊಸೆಯಂದಿರೂ ರಾಷ್ಟ್ರಪತಿ ಗೈಡ್ ಗಳಾಗಿದ್ದಾರೆ.