ನ್ಯೂಯಾರ್ಕ್: ಧಾರ್ಮಿಕ ಸ್ವಾತಂತ್ರ್ಯದ ತೀವ್ರ ಉಲ್ಲಂಘನೆಗೆ ಸಂಬಂಧಿಸಿದಂತೆ ಚೀನಾ, ಉತ್ತರ ಕೊರಿಯಾ ಪಟ್ಟಿಗೆ ಪಾಕಿಸ್ತಾನವನ್ನು ಸೇರಿಸಿರುವ ಅಮೆರಿಕ, ಇವು ಕಳವಳಕಾರಿ ರಾಷ್ಟ್ರಗಳು ಎಂದು ಹೇಳಿದೆ.
ಅಮೆರಿಕದ ವಿದೇಶಾಂಗ ನೀತಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹಾಗೂ ಮುಕ್ತ ನಂಬಿಕೆಯು ಅತಿ ಮುಖ್ಯವಾದ ಅಂಶ.
'ಅಮೆರಿಕ ನಂಬಿರುವ ಈ ಸಿದ್ಧಾಂತದ ಆಧಾರದಲ್ಲೇ ಧಾರ್ಮಿಕ ಸ್ವಾತಂತ್ರ್ಯವನ್ನು ತೀವ್ರವಾಗಿ ಉಲ್ಲಂಘಿಸುತ್ತಿರುವ ಬರ್ಮಾ, ಚೀನಾ, ಕ್ಯೂಬಾ, ಉತ್ತರ ಕೊರಿಯಾ, ಎರಿಟ್ರೀ, ಇರಾನ್, ನಿಕಾರಾಗುವಾ, ಪಾಕಿಸ್ತಾನ, ರಷ್ಯಾ, ಸೌದಿ ಅರೇಬಿಯಾ, ತಜಕಿಸ್ತಾನ ಹಾಗೂ ತುರ್ಕೇಮನಿಸ್ತಾನವನ್ನು ಕಳವಳಕಾರಿ ರಾಷ್ಟ್ರಗಳು ಎಂದು ಗುರುತಿಸಲಾಗಿತ್ತು' ಎಂದು ಮಾಹಿತಿ ನೀಡಿದ್ದಾರೆ.
'ಇದರೊಂದಿಗೆ ಧಾರ್ಮಿಕ ಸ್ವಾತಂತ್ರ್ಯ ವಿಷಯದಲ್ಲಿ ಅಲ್ಜೇರಿಯಾ, ಅಜರ್‌ಬೈಜಾನ್, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಕೊಮೊರೊಸ್, ವಿಯಟ್ನಾಂ ಮೇಲೆ ವಿಶೇಷ ನಿಗಾ ಇಡಬೇಕಾದ ರಾಷ್ಟ್ರಗಳು ಎಂದು ಪಟ್ಟಿ ಮಾಡಲಾಗಿದೆ' ಎಂದಿದ್ದಾರೆ.
ಅಲ್ ಶಬಾಬ್, ಬೊಕೊ ಹರಮ್, ಹಯಾತ್ ತೆಹ್ರೀರ್ ಅಲ್ ಶಾಮ್, ದಿ ಹೌತೀಸ್, ಐಎಸ್‌ಐಎಸ್-ಸಹೆಲ್, ಐಎಸ್‌ಐಎಸ್-ಪಶ್ಚಿಮ ಆಫ್ರಿಕಾ, ಅಲ್ ಖೈದಾ, ಜಮಾತ್ ನಾಸರ್ ಅಲ್ ಇಸ್ಲಾಂ ವಲ್ ಮುಸ್ಲಿಮಿನ್ ಮತ್ತು ತಾಲಿಬಾನ್ ಅನ್ನು ಕಳವಳಕಾರಿ ಸಂಘಟನೆಗಳು ಎಂದು ಅಮೆರಿಕ ಪಟ್ಟಿ ಮಾಡಿದೆ.
'ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದವರ ಮೇಲೆ ಹಲ್ಲೆ ಹಾಗೂ ಧಾರ್ಮಿಕ ಕೇಂದ್ರಗಳ ಧ್ವಂಸ ಪ್ರಕರಣಗಳನ್ನು ಸರ್ಕಾರಗಳು ಕೊನೆಗಾಣಿಸಬೇಕು. ಶಾಶ್ವತ ಶಾಂತಿ ನೆಲೆಸುವಂತೆ ಮಾಡಲು ತಪ್ಪಿತಸ್ಥರನ್ನು ದೀರ್ಘಕಾಲ ಕಾರಾಗೃಹ ಶಿಕ್ಷೆಗೆ ಒಳಪಡಿಸಬೇಕು' ಎಂದು ಬ್ಲಿಂಕೆನ್ ಸಲಹೆ ನೀಡಿದ್ದಾರೆ.