ಬದಿಯಡ್ಕ: ನಮ್ಮ ಜೀವನದ ಪುಣ್ಯದಿನವಿದಾಗಿದೆ. ವಿವಾದಿತ ಕಟ್ಟಡವನ್ನು ತೆರವುಗೊಳಿಸಿ ನೂತನ ರಾಮಮಂದಿರ ನಿರ್ಮಾಣದ ತನಕ ಅವಿಸ್ಮರಣೀಯ ದಿನಗಳನ್ನು ನೋಡಿದ ಪುಣ್ಯ ನಮ್ಮ ಪಾಲಿಗಿದೆ. ಹಿಂದುಗಳೆಲ್ಲರೂ ಒಗ್ಗಟ್ಟಿನಿಂದ ಮುಂದುವರಿದರೆ ರಾಮರಾಜ್ಯವೆಂಬ ಸಂಕಲ್ಪ ಸಾಕಾರವೆಂದು ಹೇಳಬಹುದು. ಕರಸೇವೆಯ ಮಧುರಕ್ಷಣಗಳು ನಮ್ಮನ್ನು ಅಯೋಧ್ಯೆಯತ್ತ ಕೊಂಡೊಯ್ಯುತ್ತದೆ ಎಂದು ಹಿರಿಯ ವಕೀಲ ವಾಶೆ ಶ್ರೀಕೃಷ್ಣ ಭಟ್ ಹೇಳಿದರು.
ಕುಂಟಿಕಾನ ಮಾಡತ್ತಡ್ಕ ಶ್ರೀ ಹರಿಹರ ಭಜನಾ ಮಂದಿರ ಸಮಿತಿ, ಶ್ರೀ ಭಾರತಾಂಬಾ ಸೇವಾ ಟ್ರಸ್ಟ್ ಹಾಗೂ ಹರಿಹರ ಬಾಲಗೋಕುಲ ಸಮಿತಿ ಮಾಡತ್ತಡ್ಕ ಇವರ ಜಂಟಿ ಆಶ್ರಯದಲ್ಲಿ ಸೋಮವಾರ ಶ್ರೀಮಂದಿರದಲ್ಲಿ ಕರಸೇವಕರಿಗೆ ಹಾಗೂ ಶ್ರೀರಾಮ ಮಂದಿರ ಹೋರಾಟಗಾರರಿಗೆ ನಡೆದ ಗೌರವಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಿರಿಯ ಕರಸೇವಕ ಗೋವಿಂದ ಭಟ್ ಮಿಂಚಿನಡ್ಕ, ಕರಸೇವಕ ಪಾಕತಜ್ಞ ಗಣೇಶ್ ಭಟ್ಟ ಸರಳಿ ತಮ್ಮ ಅನುಭವವನ್ನು ತೆರೆದಿಟ್ಟರು. ಕರಸೇವಕ ಗಣಪತಿ ಪ್ರಸಾದ ಕುಳಮರ್ವ ಅವರು ಮಾತನಾಡಿ ಹಲವಾರು ಹೋರಾಟಗಳ ಫಲವಾಗಿ ವಿಶ್ವಹಿಂದೂಪರಿಷತ್ ನೇತೃತ್ವದಲ್ಲಿ ರಾಮಮಂದಿರ ಮತ್ತೆ ನಿರ್ಮಾಣವಾಗಿದೆ. ಮೊಗಲರ ಆಕ್ರಮಣಕ್ಕಿಂತಲೂ ಕ್ರೂರವಾಗಿ ಮುಲಾಯಂ ಸಿಂಗ್ ಸರ್ಕಾರವು ಹಿಂದುಗಳ ಹತ್ಯೆಯನ್ನು ಮಾಡಿದೆ. ಇದೀಗ ಮೋದಿಯವರ ನೇತೃತ್ವದಲ್ಲಿ ಭಾರತವೆಂಬ ರಾಮರಾಜ್ಯ ಬಂದಿದೆ ಎಂದರು. ಕರಸೇವಕ ಮಹೇಶ ಸರಳಿ ಮಾತನಾಡಿ ಜೀವದ ಹಂಗನ್ನು ತೊರೆದು ರಾಮನಾಮದ ಬಲದಿಂದ ಕರಸೇವೆಯನ್ನು ಮಾಡಿದ್ದೇವೆ. ವಿವಾದಿತ ಕಟ್ಟಡದ ಮೇಲೆ ಭಗವಾಧ್ವಜ ಹಾರಿದ ಸಂದರ್ಭ ಇಂದೂ ಹಸಿರಾಗಿ ಕಣ್ಣಮುಂದೆ ಬರುತ್ತದೆ ಎಂದರು. ಶ್ರೀಮಂದಿರದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಅಣಬೈಲು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೋಪಾಲಮಣಿಯಾಣಿ ಕುಂಟಿಕಾನ, ರಾಮನಾಯ್ಕ ಕುಂಟಿಕಾನ, ಚಂದ್ರಶೇಖರ, ರಾಘವ, ಶಿವರಾಮ, ನಿಟ್ಟೆ ಮತ್ತಿತರರು ಉಪಸ್ಥಿತರಿದ್ದರು. ಮಾಡತ್ತಡ್ಕ ದೈವಗಳ ಸೇವಾಸಮಿತಿಯ ಅಧ್ಯಕ್ಷ ರಮೇಶ ಕೇರ ಸ್ವಾಗತಿಸಿದರು. ಕಿಶೋರ್ ದೇವರಮೆಟ್ಟು ನಿರೂಪಿಸಿದರು. ಬಾಲಗೋಕುಲದ ಅಧ್ಯಾಪಿಕೆ ಪ್ರೇಮಲತಾ ಕೇರ ವಂದಿಸಿದರು. ಸಭಾ ಕಾರ್ಯಕ್ರಮದಲ್ಲಿ ನಂತರ ರಾಮಲಲ್ಲಾ ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ನೇರಪ್ರಸಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.