ನವದೆಹಲಿ: ಉತ್ತರಪ್ರದೇಶದ ಮಥುರಾದ ಬೃಂದಾವನದಲ್ಲಿ ಬಾಲಕಿಯರ ಮೊದಲ ಸೈನಿಕ ಶಾಲೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ಉದ್ಘಾಟಿಸಿದರು.
ಬೃಂದಾವನದಲ್ಲಿ ಸಂವಿದ್ ಗುರುಕುಲಂ ಬಾಲಕಿಯರ ಸೈನಿಕ ಶಾಲೆ ಉದ್ಘಾಟಿಸಿದ ಸಿಂಗ್, 'ಸೈನಿಕ ಶಾಲೆಗಳಿಗೆ ಹೆಣ್ಣುಮಕ್ಕಳ ಪ್ರವೇಶ ಅವಕಾಶ ಕಲ್ಪಿಸಿದ್ದು ಮಹಿಳಾ ಸಬಲೀಕರಣದ ಇತಿಹಾಸದಲ್ಲಿ ಒಂದು ಸುವರ್ಣ ಕ್ಷಣ.
ಮಿಜೋರಾಂನ ಚಿಂಗ್‌ಚಿಪ್‌ನಲ್ಲಿ ಬಾಲಕಿಯರ ಸೈನಿಕ ಶಾಲೆಯ ಪ್ರಾಯೋಗಿಕ ಯೋಜನೆ ಯಶಸ್ವಿಯಾದ ಎರಡು ವರ್ಷಗಳ ನಂತರ, ದೇಶದಲ್ಲಿ ಹೆಣ್ಣುಮಕ್ಕಳಿಗಾಗಿ ಮತ್ತಷ್ಟು ಸೈನಿಕ ಶಾಲೆ ತೆರೆಯುವ ಸರ್ಕಾರದ ಉದ್ದೇಶ ಮಥುರಾದಲ್ಲಿ ಅನುಷ್ಠಾನಕ್ಕೆ ಬಂದಿದೆ.
ಶಸಸ್ತ್ರ ಪಡೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಸಲುವಾಗಿ ಸರ್ಕಾರವು ಬಾಲಕಿಯರ ಸೈನಿಕ ಶಾಲೆಗಳನ್ನು ತೆರೆಯುವ ನಿರ್ಧಾರ ತೆಗೆದುಕೊಂಡಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.
ಖಾಸಗಿ ವಲಯದ ಸಹಭಾಗಿತ್ವದಲ್ಲಿ 100 ಹೊಸ ಸೈನಿಕ ಶಾಲೆಗಳನ್ನು ಆರಂಭಿಸಲು ಈಗ ನಿರ್ಧಾರ ತೆಗೆದುಕೊಂಡಿದೆ. ಈ ಪೈಕಿ 42 ಶಾಲೆಗಳಿಗೆ ಅನುಮೋದನೆ ನೀಡಿದ್ದು, ಇದರಲ್ಲಿ 19 ಶಾಲೆಗಳು ಆರಂಭವಾಗಿವೆ. ಬೃಂದಾವನ ಶಾಲೆಯಲ್ಲಿ 870 ಬಾಲಕಿಯರಿಗೆ ಪ್ರವೇಶ ಅವಕಾಶವಿದೆ.