ನವದೆಹಲಿ: ಇಂದು ರಾಷ್ಟ್ರೀಯ ಹೆಣ್ಣುಮಕ್ಕಳ ದಿನ. ಈ ಹಿನ್ನೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೆಣ್ಣುಮಕ್ಕಳ ಸಾಧನೆಯನ್ನು ಶ್ಲಾಘಿಸಿದ್ದಾರೆ. ಬಾಲಕಿಯರು ಕಲಿಯಲು, ಬೆಳೆಯಲು ಮತ್ತು ಅಭಿವೃದ್ಧಿ ಹೊಂದಲು ಅವಕಾಶವಿರುವ ರಾಷ್ಟ್ರವನ್ನು ನಿರ್ಮಿಸಲು ತಮ್ಮ ಸರ್ಕಾರವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ರಾಷ್ಟ್ರೀಯ ಬಾಲಕಿಯರ ದಿನದಂದು, ಹೆಣ್ಣು ಮಗುವಿನ ಅದಮ್ಯ ಮನೋಭಾವ ಮತ್ತು ಸಾಧನೆಗಳಿಗೆ ನಾವು ವಂದಿಸುತ್ತೇವೆ. ಎಲ್ಲಾ ಕ್ಷೇತ್ರಗಳಲ್ಲಿ ಪ್ರತಿ ಹೆಣ್ಣು ಮಗುವಿನ ಸಾಮರ್ಥ್ಯವನ್ನು ಗುರುತಿಸುತ್ತೇವೆ. ನಮ್ಮ ರಾಷ್ಟ್ರ ಮತ್ತು ಸಮಾಜವನ್ನು ಉತ್ತಮಗೊಳಿಸುವ ಬದಲಾವಣೆಯ ಹರಿಕಾರರು ಹೆಣ್ಣುಮಕ್ಕಳು. ಕಳೆದ ದಶಕದಲ್ಲಿ, ನಮ್ಮ ಸರ್ಕಾರವು ಪ್ರತಿ ಹೆಣ್ಣು ಮಗುವಿಗೆ ಕಲಿಯಲು, ಬೆಳೆಯಲು ಮತ್ತು ಅಭಿವೃದ್ಧಿ ಹೊಂದಲು ಅವಕಾಶವಿರುವ ರಾಷ್ಟ್ರವನ್ನು ನಿರ್ಮಿಸಲು ಅನೇಕ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಹೆಣ್ಣುಮಕ್ಕಳ ಅಭ್ಯುದಯಕ್ಕಾಗಿ, ಲಿಂಗ ಅನುಪಾತವನ್ನು ಹೆಚ್ಚಿಸಲು ಮತ್ತು ಸಬಲೀಕರಣಗೊಳಿಸಲು 2015 ರಲ್ಲಿ ಮೋದಿ ಸರ್ಕಾರವು 'ಬೇಟಿ ಬಚಾವೋ ಬೇಟಿ ಪಡಾವೋ' (ಹೆಣ್ಣುಮಕ್ಕಳನ್ನು ಉಳಿಸಿ, ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ) ಯೋಜನೆಯನ್ನು ಆರಂಭಿಸಿತ್ತು.