ನವದೆಹಲಿ: ಲೋಕಸಭಾ ಚುನಾವಣೆಯ ತಾತ್ಕಾಲಿಕ ದಿನಾಂಕವನ್ನು ಏಪ್ರಿಲ್ 16ಕ್ಕೆ ನಿಗದಿಪಡಿಸಲಾಗಿದೆ ಎಂದು ದೆಹಲಿಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು 11 ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಕಳುಹಿಸಿದ ಆಂತರಿಕ ಟಿಪ್ಪಣಿಯು ಮಂಗಳವಾರ ಭಾರಿ ಚರ್ಚೆಗೆ ಗ್ರಾಸವಾಯಿತು.

ಲೋಕಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿದೆ. ಮತದಾರರ ಪಟ್ಟಿ ಅಂತಿಮಗೊಳಿಸುವುದು, ಅಧಿಕಾರಿಗಳ ವರ್ಗಾವಣೆ ಸೇರಿದಂತೆ ವಿವಿಧ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿದೆ. ಚುನಾವಣಾಧಿಕಾರಿ ಕಚೇರಿಯ ಆಂತರಿಕ ಟಿಪ್ಪಣಿಯು ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ಅದರ ಬೆನ್ನಲ್ಲೇ, ಚುನಾವಣಾಧಿಕಾರಿ ಕಚೇರಿ ಸ್ಪಷ್ಟನೆ ನೀಡಿ, 'ಲೋಕಸಭೆ ಚುನಾವಣೆಯ ವಿವಿಧ ಚಟುವಟಿಕೆಗಳನ್ನು ಯೋಜಿಸಲು ಅಧಿಕಾರಿಗಳಿಗೆ ಸಹಾಯ ಮಾಡಲು ಈ ತಾತ್ಕಾಲಿಕ ದಿನಾಂಕವನ್ನು ನಮೂದಿಸಲಾಗಿದೆ. ಇದು ಉಲ್ಲೇಖಕ್ಕಾಗಿ ಮಾತ್ರ' ಎಂದು ಸ್ಪಷ್ಟಪಡಿಸಿತು. 'ಇದು ಚುನಾವಣಾ ವೇಳಾಪಟ್ಟಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕೇಂದ್ರ ಚುನಾವಣಾ ಆಯೋಗವು ಸೂಕ್ತ ಸಮಯದಲ್ಲಿ ವೇಳಾಪಟ್ಟಿ ಪ್ರಕಟಿಸಲಿದೆ' ಎಂದೂ ಹೇಳಿತು.
2019ರ ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಮಾರ್ಚ್ 10ರಂದು ಘೋಷಿಸಲಾಗಿತ್ತು. ಏಪ್ರಿಲ್ 11ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆದಿತ್ತು. ಮೇ 23ರಂದು ಮತ ಎಣಿಕೆ ನಡೆಸಲಾಗಿತ್ತು.
ಚುನಾವಣಾ ವೇಳಾಪಟ್ಟಿ ಘೋಷಣೆಗೆ ಸುಮಾರು ಮೂರು ತಿಂಗಳ ಮೊದಲು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳು ಜಾಗೃತಿ ಅಭಿಯಾನಗಳನ್ನು ನಡೆಸಬೇಕಿದೆ. ಇದಕ್ಕಾಗಿ ಅವರು ಕಳೆದ ಲೋಕಸಭಾ ಚುನಾವಣೆಯ ದಿನಾಂಕವನ್ನು ಪರಿಗಣಿಸಬಹುದು.