ನವದೆಹಲಿ: ದೇಶದ ಉತ್ತರದ ಬಹುತೇಕ ಭಾಗಗಳಲ್ಲಿ ದಟ್ಟ ಮಂಜು ಕವಿದು, ಶೀತ ಮಾರುತ ಮುಂದುವರಿದ ಕಾರಣ ಎರಡನೇ ದಿನವಾದ ಸೋಮವಾರ ಕೂಡ ದೆಹಲಿಯಲ್ಲಿ ವಿಮಾನಗಳ ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಯಿತು.
ವಿಮಾನಗಳ ರದ್ದತಿ ಅಥವಾ ವಿಳಂಬ ಹಾರಾಟದಿಂದ ರೋಸಿಹೋದ ಪ್ರಯಾಣಿಕರು ಆಕ್ರೋಶ ಹೊರಹಾಕಿದ ಘಟನೆಗಳೂ ನಡೆದವು.
ಭಾನುವಾರ ನೂರಕ್ಕೂ ಅಧಿಕ ವಿಮಾನಗಳ ಹಾರಾಟ ವಿಳಂಬವಾಗಿದ್ದರೆ, ಸೋಮವಾರ ಕೆಲವೇ ವಿಮಾನಗಳು ಹಾರಾಟ ಆರಂಭಿಸಿದವು ಎಂದು ವಿಮಾನ ನಿಲ್ಧಾಣ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ದೆಹಲಿ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ 313 ವಿಮಾನಗಳ ಸಂಚಾರ ವಿಳಂಬವಾಗಿದೆ ಹಾಗೂ 82 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ ಎಂದು ವಿಮಾನಗಳ ಸಂಚಾರ ಕುರಿತ ಮಾಹಿತಿ ಒದಗಿಸುವ 'ಫ್ಲೈಟ್‌ರಾಡಾರ್24' ಜಾಲತಾಣದಲ್ಲಿ ವಿವರಿಸಲಾಗಿದೆ.
ಇದರ ಬೆನ್ನಲ್ಲೇ, ವಿಮಾನಗಳ ಹಾರಾಟ ಹಾಗೂ ಕಾರ್ಯಾಚರಣೆಗೆ ಸಂಬಂಧಿಸಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ), 'ಪ್ರಮಾಣಿತ ಕಾರ್ಯಾಚರಣೆ ವಿಧಾನ' (ಎಸ್‌ಒಪಿ)ಗಳನ್ನು ಬಿಡುಗಡೆ ಮಾಡಿದೆ.
ಎಲ್ಲ ವಿಮಾನಯಾನ ಸಂಸ್ಥೆಗಳು ಈ ಪ್ರಮಾಣಿತ ಕಾರ್ಯಾಚರಣೆ ವಿಧಾನಗಳನ್ನು ತಕ್ಷಣದಿಂದಲೇ ಪಾಲನೆ ಮಾಡಬೇಕು ಎಂದು ಡಿಜಿಸಿಎ ಸೂಚಿಸಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ
ಸಂಸ್ಥೆಗಳ ನಿಯಂತ್ರಣಕ್ಕೂ ಮೀರಿದ ಅಸಾಧಾರಣ ಸನ್ನಿವೇಶಗಳಲ್ಲಿ ಎಸ್‌ಒಪಿಯಲ್ಲಿನ ನಿಬಂಧನೆಗಳು ಅನ್ವಯವಾಗುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.
--ಪ್ರಯಾಣಿಕನ ಅಶಿಸ್ತಿನ ವರ್ತನೆ ಒಪ್ಪಲಾಗದು: ಸಿಂಧಿಯಾ ಇಂಡಿಗೊ ವಿಮಾನದಲ್ಲಿ ಪ್ರಯಾಣಿಕನ ಅಶಿಸ್ತಿನ ವರ್ತನೆ ಒಪ್ಪಲಾಗದು. ಆತನ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸೋಮವಾರ ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅವರು 'ದಟ್ಟ ಮಂಜಿನಿಂದಾಗಿ ಆಗುತ್ತಿರುವ ತೊಂದರೆಯನ್ನು ನಿವಾರಿಸುವುದಕ್ಕೆ ಸಂಬಂಧಪಟ್ಟ ಎಲ್ಲ ಭಾಗೀದಾರರು ನಿರಂತರವಾಗಿ ಶ್ರಮಿಸಿದ್ದಾರೆ. ಇಂತಹ ಕಷ್ಟಕಾಲದಲ್ಲಿ ಪ್ರಯಾಣಿಕರ ಸಹಕಾರ ಅಗತ್ಯ' ಎಂದು ಹೇಳಿದ್ದಾರೆ. 'ಭವಿಷ್ಯದಲ್ಲಿ ಇಂತಹ ಸನ್ನಿವೇಶಗಳು ಉದ್ಭವವಾಗದಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ' ಎಂದೂ ತಿಳಿಸಿದ್ದಾರೆ. 'ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿಮಾನಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ತೀರ್ಮಾನವನ್ನು ಅಧಿಕಾರಿಗಳು ಕೈಗೊಂಡಿದ್ದರು' ಎಂದೂ ಅವರು 'ಎಕ್ಸ್'ನಲ್ಲಿ ಹೇಳಿದ್ದಾರೆ.
20 ವಿಮಾನಗಳ ಹಾರಾಟ ವಿಳಂಬ
ಬೆಂಗಳೂರು: ತಲುಪಬೇಕಿದ್ದ ನಗರಗಳಲ್ಲಿನ ಪ್ರತಿಕೂಲ ಹವಾಮಾನದ ಕಾರಣದಿಂದ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಸೋಮವಾರ 20
ವಿಮಾನಗಳು ನಿಗದಿತ ಸಮಯಕ್ಕಿಂತ ತಡವಾಗಿ ಹಾರಾಟ ಆರಂಭಿಸಿದವು.
'ಬೆಂಗಳೂರಿನಲ್ಲಿ ಹವಾಮಾನ ದಲ್ಲಿ ಯಾವುದೇ ತೊಂದರೆ ಇರಲಿಲ್ಲ.
ಆದರೆ ಕೋಲ್ಕತ್ತಾ ಚೆನ್ನೈ ಅಲಹಾಬಾದ್ ಮತ್ತು ಹುಬ್ಬಳ್ಳಿಯಲ್ಲಿ ಪ್ರತಿಕೂಲ ಹವಾಮಾನ ಇದ್ದ ಕಾರಣದಿಂದ ಕೆಐಎಯಿಂದ ಈ ವಿಮಾನಗಳು ಹಾರಾಟ ಆರಂಭಿಸುವುದು ತಡವಾಯಿತು' ಎಂದು ಕೆಐಎ ನಿರ್ವಹಣೆಯ ಉಸ್ತುವಾರಿ ಹೊತ್ತಿರುವ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವಕ್ತಾರರು 'ಪ್ರಜಾವಾಣಿ'ಗೆ ತಿಳಿಸಿದರು.ಚೆನ್ನೈನಲ್ಲಿ ಇಳಿಯಬೇಕಿದ್ದ ಆರು ವಿಮಾನಗಳನ್ನು ಮಾರ್ಗ ಬದಲಿಸಿ ಕೆಐಎನಲ್ಲಿ ಇಳಿಸಲಾಗಿತ್ತು. ದೀರ್ಘ ಸಮಯದ ಬಳಿಕ ಆ ವಿಮಾನಗಳು ಪುನಃ ಚೆನ್ನೈನತ್ತ ತೆರಳಿದವು. ಅವುಗಳಲ್ಲಿ ಬಹುತೇಕ ವಿಮಾನಗಳು ಇಂಡಿಗೋ ಕಂಪನಿಗೆ ಸೇರಿದ್ದವು ಎಂದು ಅವರು ಮಾಹಿತಿ ನೀಡಿದರು.ಭಾನುವಾರ ಕೆಐಎನಿಂದ ಹೊರಡಬೇಕಿದ್ದ 50 ವಿಮಾನಗಳ ಹಾರಾಟ ವಿಳಂಬವಾಗಿತ್ತು. ಏಳು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿತ್ತು.