ಕುಂಬಳೆ: ಮಾರ್ಚ್ ತಿಂಗಳಲ್ಲಿ ಜರಗಲಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಯ ಪೂರ್ವಭಾವಿಯಾಗಿ ಕಲಿಕಾ ಸಿದ್ಧತೆಯ ವಿವಿಧ ಆಯಾಮಗಳ ಕುರಿತು ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿನ ವಿದ್ಯಾರ್ಥಿಗಳಿಗೆ ಮುಳ್ಳೇರಿಯ ಮಂಡಲ ವಿದ್ಯಾರ್ಥಿ ವಾಹಿನಿ ಮತ್ತು ಗುಂಪೆ ವಲಯದ ನೇತೃತ್ವದಲ್ಲಿ `ಪರೀಕ್ಷೆ ನಿರೀಕ್ಷೆ' ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ನಿವೃತ್ತ ಪ್ರಾಂಶುಪಾಲ ಯಸ್ ವಿಶ್ವೇಶ್ವರ ಭಟ್ ಉಂಡೆಮನೆ ಪರೀಕ್ಷೆಯ ತಯಾರಿಯ ಬಗ್ಗೆ ಮಕ್ಕಳಿಗೆ ಧೈರ್ಯ ತುಂಬಿದರು. ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ತರಗತಿ ನಡೆಸಿ, ಶಿಕ್ಷಣವು ವ್ಯಕ್ತಿತ್ವ ವಿಕಾಸದ ನಿರಂತರ ಹಾದಿಯಾಗಿದೆ, ಕಲಿಕೆ ಬದುಕನ್ನು ರೂಪಿಸುತ್ತದೆ, ಗುರು ಹಿರಿಯರು, ಹೆತ್ತವರ ಬಗ್ಗೆ ವಿದ್ಯಾರ್ಥಿಗಳಲ್ಲಿ ಸಮರ್ಪಣಾಭಾವ ತುಂಬಿರಬೇಕು ಎಂದರು. ಹತ್ತನೇ ತರಗತಿಯ ಕಲಿಕೆಯ ನಂತರ ಮುಂದಿನ ಶಿಕ್ಷಣದ ವಿವಿಧ ಸಾಧ್ಯತೆಯ ಬಗ್ಗೆಯೂ ಮಾಹಿತಿಯನ್ನು ನೀಡಿದರು. ಸುಮಾರು ಇನ್ನೂರ ನಲುವತ್ತು ವಿದ್ಯಾರ್ಥಿಗಳು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.
ಶಾಲಾ ವ್ಯವಸ್ಥಾಪಕ ಎನ್ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಇ ಎಚ್ ಗೋವಿಂದ ಭಟ್ ಸ್ವಾಗತಿಸಿ, ಅಭ್ಯಾಗತರನ್ನು ಪರಿಚಯಿಸಿದರು. ಕಲ್ಲಕಟ್ಟ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ, ಮುಳ್ಳೇರಿಯ ಹವ್ಯಕ ವಲಯದ ಪ್ರಧಾನ ಶ್ಯಾಮಪ್ರಸಾದ ಕುಳಮರ್ವ ಶುಭ ಹಾರೈಸಿದರು. ಶಿಕ್ಷಕಿ ಉಮಾದೇವಿ ನಿರೂಪಿಸಿದರು. ಶಿಲ್ಪ ವಂದಿಸಿದರು. ಇ ಕೇಶವ ಪ್ರಸಾದ್ ಕಾರ್ಯಕ್ರಮವನ್ನು ಸಂಯೋಜಿಸಿದರು. ರಾಮಕೃಷ್ಣ ಭಟ್, ಪ್ರದೀಪ, ಶಿವಪ್ರಸಾದ್ ಸಿ, ಸೂರ್ಯನಾರಾಯಣ ಭಟ್, ಪ್ರಶಾಂತ ಹೊಳ್ಳ ನೀರಾಳ ಹಾಗೂ ದಿನೇಶ್ ಕೆ ಸಹಕರಿಸಿದರು. ಶಾಲಾ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.