ಕಾಸರಗೋಡು|: 'ಮೋದಿ ಗ್ಯಾರಂಟಿ'ಸಂದೇಶದೊಂದಿಗೆ ಎನ್‍ಡಿಎ ರಾಜ್ಯ ಸಮಿತಿ ಅಧ್ಯಕ್ಷ ಕೆ. ಸುರೇಂದ್ರನ್ ನೇತೃತ್ವದಲ್ಲಿ ಕೇರಳ ಪಾದಯಾತ್ರೆಗೆ ಗುರುವಾರ ಕಾಸರಗೋಡಿನಿಂದ ಅದ್ದೂರಿ ಚಾಲನೆ ನೀಡಲಾಯಿತು. ಗೊವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಪಕ್ಷದ ಧ್ವಜವನ್ನು ಜಾಥಾ ಮುಖಂಡ ಕೆ. ಸುರೇಂದ್ರನ್ ಅವರಿಗೆ ಹಸ್ತಾಂತರಿಸುವ ಮೂಲಕ ಪಾದಯಾಥ್ರೆಗೆ ಚಾಲನೆ ನೀಡಿದರು.
ಈ ಸಂದರ್ಭ ಡಾ. ಪ್ರಮೋದ್ ಸಾವಂತ್ ಮಾತನಾಡಿ, ಆರ್ಥಿಕ ಅಧ:ಪಥನದತ್ತ ಸಾಗುತ್ತಿರುವ ಕೇರಳಕ್ಕೆ ಡಬ್ಬಲ್ ಇಂಜಿನ್ ಸರ್ಕಾರ ಅನಿವಾರ್ಯವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರದ ಜತೆಗೆ ಕೇರಳದಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎಯನ್ನು ಅದಿಕಾರಕ್ಕೇರಿಸುವಂತೆ ಮನವಿ ಮಾಡಿದರು. ನರೇಂದ್ರ ಮೋದಿ ಅವರ ಗ್ಯಾರಂಟಿ ಯೋಜನೆ ಕೇರಳದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದೆ. ಪ್ರದಾನಿ ಮೋದಿ ಅವರು ಜಾತಿ, ಧರ್ಮ ನೋಡಿಕೊಂಡು ಅಭಿವೃದ್ಧಿ ಮಾಡಿಲ್ಲ, ಬದಲಾಗಿ ದೇಶದ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನದೊಂದಿಗೆ ಹಣ ವಿನಿಯೋಗಿಸಿದ್ದಾರೆ. ನವಭಾರತ ನಿರ್ಮಾಣದ ಆಲೋಚನೆ ಮೊತ್ತಮೊದಲು ಕಂಡುಕೊಂಡಿರುವ ನರೇಂದ್ರ ಮೋದಿ ಅವರ ಕೈಬಲಪಡಿಸಲು ನಾವೆಲ್ಲರೂ ಶ್ರಮಿಸಬೇಕಾದ ಅನಿವಾರ್ಯತೆಯಿದೆ. 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್'ಎಂಬ ಧೋರಣೆಯೊಂದಿಗೆ ಕೇಂದ್ರದಲ್ಲಿ ಮತ್ತೆ ಎನ್‍ಡಿಎ ಅದಿಕಾರಕ್ಕೆರಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ತಿಳಿಸಿದರು. ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಜನಸ್ತೋಮದೆಡೆಗೆ ಕೈಬೀಸಿ ಅಭಿನಂದನೆ ಸಲ್ಲಿಸಿದ ಡಾ. ಪ್ರಮೋದ್ ಸಾವಂತ್, ಎರಡೂ ಕೈ ಮೇಲಕ್ಕೆತ್ತಿ ಜೈ ಶ್ರೀರಾಮ್, ಜೈಜೈ ಶ್ರೀರಾಮ್, ಜೈಜೈ ಮೋದಿ, ಹರ್‍ಘರ್ ಮೋದಿ ಉದ್ಘಾರದೊಂದಿಗೆ ಸಭಿಕರಲ್ಲಿ ಆವೇಶ ಮನೆ ಮಾಡುವಂತೆ ಮಾಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅದ್ಯಕ್ಷತೆ ವಹಿಸಿದ್ದರು. ವಿದೇಶಾಂಗ ಖಾತೆ ಸಹಾಯಕ ಸಚಿವ ವಿ. ಮುರಳೀಧರನ್ ಮುಖ್ಯ ಭಾಷಣ ಮಾಡಿದರು. ಬಿಜೆಪಿ ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷ ಎ.ಪಿ ಅಬ್ದುಲ್ಲಕುಟ್ಟಿ, ಪಿ.ಕೆ ಕೃಷ್ಣದಾಸ್, ಕುಮ್ಮನಂ ರಾಜಶೇಖರನ್, ಸಿ.ಕೆ ಪದ್ಮನಾಭನ್, ಎಂ.ಟಿ ರಮೇಶ್, ಸಿ.ಕೆ ಪದ್ಮನಾಭನ್, ಬಿಡಿಜೆಎಸ್‍ನ ತುಷಾರ್ ವೆಳ್ಳಾಪಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ ಕುಂಟಾರು ರವೀಶ ತಂತ್ರಿ, ಅರೆಯಕಂಡಿ ಸಂತೋಷ್, ಜೇಕಬ್ ಪೀಟರ್, ವಿ.ವಿ ರಾಜೇಂದ್ರನ್, ವಿ. ರವೀಂದ್ರನ್, ಸವಿತಾಟೀಚರ್ ಮೊದಲಾದವರು ಉಪಸ್ಥಿತರಿದ್ದರು.
ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದ ಭ್ರಷ್ಟಾಚಾರ, ಕೇಂದ್ರ ಸರ್ಕಾರದ ವಿರುದ್ಧ ಸುಳ್ಳು ಪ್ರಚಾರ ಖಂಡಿಸಿ ಜಾಥಾ ಆಯೋಜಿಸಲಾಗಿತ್ತು. ಕಾಸರಗೋಡಿನಿಂದ ಪ್ರಯಾಣ ಆರಂಭಿಸಿದ ಜಾಥಾ ಮೆಲ್ಪರಂಬದಲ್ಲಿ ಸಂಪನ್ನಗೊಂಡಿತು. ರಾಜ್ಯದ 20ಲೋಕಸಭಾ ಕ್ಷೇತ್ರಗಳನ್ನು ಹಾದುಹೋಗುವ ಪಾದಯಾತ್ರೆ, ತಿರುವನಂತಪುರದಲ್ಲಿ ಸಮಾರೋಪಗೊಳ್ಳಲಿದೆ.