ನವದೆಹಲಿ: ಭಾರತ ಮತ್ತು ಚೀನಾದ ಸೈನಿಕರ ನಡುವೆ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ನಡೆದ ಎರಡು ಘಟನೆಗಳು, ಭಾರತೀಯ ಸೇನಾ ಸಿಬ್ಬಂದಿಗೆ ನೀಡಿದ ಶೌರ್ಯ ಪ್ರಶಸ್ತಿಗಳ ಉಲ್ಲೇಖಗಳೊಂದಿಗೆ ಬೆಳಕಿಗೆ ಬಂದಿವೆ.
ಎಲ್‌ಎಸಿ ಉದ್ದಕ್ಕೂ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ಸೈನಿಕರ ಆಕ್ರಮಣಕಾರಿ ವರ್ತನೆಗೆ ಭಾರತೀಯ ಪಡೆಗಳು ಹೇಗೆ ಸದೃಢವಾಗಿ ಪ್ರತಿಕ್ರಿಯಿಸಿದವು ಎಂಬುದರ ಸಂಕ್ಷಿಪ್ತ ವಿವರವನ್ನು ಕಳೆದ ವಾರ ಸೇನೆಯ ವೆಸ್ಟರ್ನ್ ಕಮಾಂಡ್‌ನಲ್ಲಿ ನಡೆದ ಸಮಾರಂಭದಲ್ಲಿ ಓದಿದ ಉಲ್ಲೇಖಗಳು ಒದಗಿಸಿವೆ.
ಚಂಡಿಮಂದಿರದಲ್ಲಿ ಪ್ರಧಾನ ಕಚೇರಿ ಹೊಂದಿರುವ ಸೇನೆಯ ವೆಸ್ಟರ್ನ್ ಕಮಾಂಡ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ, ಶೌರ್ಯ ಪ್ರಶಸ್ತಿಯ ವಿವರಗಳನ್ನು ಒಳಗೊಂಡ ಜನವರಿ 13ರ ಸಮಾರಂಭದ ವಿಡಿಯೊವನ್ನು ಅಪ್‌ಲೋಡ್ ಮಾಡಿತ್ತು. ಆದರೆ ಸೋಮವಾರ ಅದನ್ನು ನಿಷ್ಕ್ರಿಯೆಗೊಳಿಸಿದೆ.
ಅದರಲ್ಲಿ ಉಲ್ಲೇಖಿಸಲಾದ ಘಟನೆಗಳು 2021ರ ಸೆಪ್ಟೆಂಬರ್ ಮತ್ತು 2022ರ ನವೆಂಬರ್ ನಡುವೆ ನಡೆದಿವೆ. ಆದರೆ ಈ ಬಗ್ಗೆ ಸೇನೆಯಿಂದ ಯಾವುದೇ ತಕ್ಷಣದ ಪ್ರಕ್ರಿಯೆ ದೊರೆತಿಲ್ಲ.
2020ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯ ಬಳಿಕ ಭಾರತೀಯ ಸೇನೆಯು 3,488 ಕಿ.ಮೀ ಉದ್ದವೂ ಸನ್ನದ್ಧ ಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. 2020 ಮೇ ತಿಂಗಳಿನಲ್ಲಿ ಪೂರ್ವ ಲಡಾಖ್‌ನಲ್ಲಿ ಭಾರತ- ಚೀನಾ ಸೈನಿಕರ ನಡುವೆ ನಡೆದ ಕಾದಾಟದ ಬಳಿಕ, ಮೂರೂವರೆ ವರ್ಷಗಳಲ್ಲಿ ಎರಡೂ ದೇಶಗಳ ಸೈನಿಕರ ನಡುವೆ ಎಲ್‌ಎಸಿ ಉದ್ದಕ್ಕೂ ಅನೇಕ ಚಕಮಕಿಗಳು ನಡೆದಿವೆ.
ಚೀನಿ ಪಡೆಗಳು 2022ರ ಡಿಸೆಂಬರ್ 9ರಂದು ಎಲ್‌ಎಸಿಯ ತವಾಂಗ್ ಸೆಕ್ಟರ್‌ನಲ್ಲಿ ಉಲ್ಲಂಘನೆಗೆ ಯತ್ನಿಸಿದ್ದವು. ಅಲ್ಲದೆ ಏಕಪಕ್ಷೀಯವಾಗಿ ಯಥಾಸ್ಥಿತಿಯನ್ನು ಬದಲಿಸಿದವು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ಘಟನೆಯ ನಾಲ್ಕು ದಿನಗಳ ಬಳಿಕ ಸಂಸತ್ತಿನಲ್ಲಿ ಉತ್ತರಿಸಿದ್ದರು. ಚೀನಾದ ಈ ಪ್ರಯತ್ನವನ್ನು ಭಾರತೀಯ ಸೈನಿಕರು ದೃಢವಾಗಿ ಎದುರಿಸಿದರು ಎಂದೂ ಸಿಂಗ್ ಹೇಳಿದ್ದರು.
ಎಲ್‌ಎಸಿ ಉಲ್ಲಂಘಿಸುವ ಚೀನಾದ ಪ್ರಯತ್ನಗಳನ್ನು ದೃಢವಾಗಿ ಎದುರಿಸಿದ ತಂಡದ ಭಾಗವಾಗಿದ್ದ ಹಲವು ಭಾರತೀಯ ಸೇನಾ ಸಿಬ್ಬಂದಿಗೆ ಈ ಸಮಾರಂಭದಲ್ಲಿ ಶೌರ್ಯ ಪ್ರಶಸ್ತಿಗಳನ್ನು ನೀಡಲಾಯಿತು ಎಂದು ಮೂಲಗಳು ತಿಳಿಸಿವೆ.