ಶಬರಿಮಲೆ: ಮಕರ ಸಂಕ್ರಾಂತಿಯಂದು ಕೇರಳದ ಅಯ್ಯಪ್ಪನ ಸನ್ನಿಧಿ ಶಬರಿಮಲೆಯಲ್ಲಿ ಸಂಭವಿಸುವ ಮಕರ ಜ್ಯೋತಿ (ಮಕರ ವಿಳಕ್ಕು) ಕಂಡು ಲಕ್ಷಾಂತರ ಭಕ್ತರು ಪುನೀತರಾದರು.
ಸೋಮವಾರ ಸಂಜೆ 6.48ರ ಸುಮಾರಿಗೆ ಶಬರಿಮಲೆ ಅಯ್ಯಪ್ಪ ದೇವಸ್ಥಾನ ಎದುರಿನ ಪೊನ್ನಂಬಲಮೇಡುವಿನಲ್ಲಿ ಮೂರು ಬಾರಿ ಜ್ಯೋತಿ ದರ್ಶನವಾಗಿದೆ. ಈ ವೇಳೆ ಭಕ್ತರು ಅಯ್ಯಪ್ಪ ನಾಮ ಸ್ಮರಣೆ ಮಾಡುತ್ತಾ ಸಂತಸಪಟ್ಟರು.
ಲಕ್ಷಾಂತರ ಮಂದಿ ಭಕ್ತಾದಿಗಳ ಶರಣಘೋಷಗಳ ನಡುವೆ ಶಬರಿಮಲೆ ಪೊನ್ನಂಬಲ ಬೆಟ್ಟದಲ್ಲಿ ಪ್ರಜ್ವಲಿಸಿದ ಮಕರಜ್ಯೋತಿಯನ್ನು ಕಂಡು ಭಕ್ತಾದಿಗಳು ಪುನೀತರಾದರು.
ಕಲಿಯುಗ ವರದ ಮಣಿಕಂಠನ ವಿಗ್ರಹಕ್ಕೆ ಚಿನ್ನದ ಆಭರಣ ತೊಡಿಸಿ 6.45ಕ್ಕೆ ದೀಪಾರಾಧನೆ ನಡೆಸಿದ ಅಲ್ಪ ಹೊತ್ತಿನಲ್ಲಿ ಮಕರಜ್ಯೋತಿ ಕಾಣಿಸಿಕೊಂಡಿದೆ.
6.47ಕ್ಕೆ ಮೊದಲ ಬಾರಿಗೆ ಜ್ಯೊತಿ ಕಾಣಿಸಿಕೊಂಡಿದ್ದು, ಸೆಕುಂಡುಗಳ ನಂತರ ಮತ್ತೆ ಎರಡು ಬಾರಿ ಪ್ರಜ್ವಲಿಸಿತು. ಸಮಧರ್ಮ ಸಮಭಾವನೆಯೊಂದಿಗೆ ಲಕ್ಷಾಂತರ ಮಂದಿ ಭಕ್ತಾದಿಗಳು ಮಕರಜ್ಯೋತಿ ವೀಕ್ಷಿಸಿದರು. ಲಕ್ಷಾಂತರಮಂದಿ ಭಕ್ತಾದಿಗಳು ಒಟ್ಟುಸೇರಿದ್ದ ಸನ್ನಿಧಾನ ಆಸುಪಾಸು ಯಾವುದೇ ನೂಕುನುಗ್ಗಲು ಇಲ್ಲದೆ, ಅತ್ಯಂತ ಶಾಂತಚಿತ್ತದಿಂದ ಮಕರಜ್ಯೋತಿ ವೀಕ್ಷಿಸಿದರು. ಶಬರಿಮಲೆಯಲ್ಲಿ ಮಕರಜ್ಯೊತಿ ವೀಕ್ಷಿಸಿದ ಭಕ್ತಾದಿಗಳು ಧನ್ಯತೆಯೊಂದಿಗೆ ಬೆಟ್ಟ ಇಳಿದು ಸಾಗಿದರು. ಈ ಮಧ್ಯೆ ಪವಿತ್ರ ಆಭರಣದ ಘೋಷಯಾತ್ರೆ ಸಾಗುವ ನಿಟ್ಟಿನಲ್ಲಿ ಅಲ್ಪಹೊತ್ತು ಪಂಪೆಯಲ್ಲಿ ಭಕ್ತಾದಿಗಳಿಗೆ ನಿಯಂತ್ರಣ ಹೇರಲಾಗಿದ್ದು, ಮಕರಜ್ಯೋತಿ ವೀಕ್ಷಣೆ ನಂತರ ಸನ್ನಿದಾನಕ್ಕೆ ಬಿಡಲಾಯಿತು.
ಜ.13ರಂದು ಪವಿತ್ರ ಆಭರಣಗಳನ್ನು ಹೊಂದಿದ ಪೆಟ್ಟಿಗೆಗಳನ್ನು ಪರಂಪರಾಗತ ಕಾನನ ಹಾದಿ ಮೂಲಕ 15ರಂದು ಸಂಜೆ ಶಬರಿಮಲೆ ಶ್ರೀ ಅಯ್ಯಪ್ಪ ದೇಗುಲಕ್ಕೆ ತಲುಪಿಸಲಾಗಿದೆ. ಶರಣಘೋಷಗಳ ನಡುವೆ ಪವಿತ್ರಾಭರಣವನ್ನು ದೇವಾಲಯದೊಳಗೆ ಬರಮಾಡಿಕೊಳ್ಳಲಾಗಿತ್ತು.
ಮಕರಜ್ಯೋತಿ ವೀಕ್ಷಣೆಗೆ ಶಬರಿಮಲೆ ಆಸುಪಾಸಿನ ಹತ್ತು ಕೇಂದ್ರಗಳಲ್ಲಿ ವ್ಯವಸ್ಥೆ ಏರ್ಪಡಿಸಲಾಗಿತ್ತು. ಸೋಮವಾರ ಬೆಳಗ್ಗೆ 2.15ಕ್ಕೆ ಗರ್ಭಗುಡಿ ಬಾಗಿಲು ತೆರೆಯಲಾಗಿದ್ದು 2.46ಕ್ಕೆ ತುಪ್ಪಾಭಿಷೇಕ ಆರಂಭಗೊಂಡಿತ್ತು. ನಂತರ ತಿರುವಾಂಕೂರು ಅರಮನೆಯಿಂದ ತರಿಸಲಾದ ತುಪ್ಪದ ತೆಂಗಿನಿಂದ ವಿಶೇಷ ಅಭಿಷೇಕ ನಡೆಸಲಾಗಿತ್ತು.
ಜ. 20ರ ವರೆಗೆ ಭಕ್ತಾದಿಗಳಿಗೆ ಶ್ರೀದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, 21ರಂದು ಪಂದಳರಾಜನಿಗೆ ಮಾತ್ರ ದೇವರ ದರ್ಶನ ಅವಕಾಶವಿರುವುದು. ನಂತರ ಗರ್ಭಗುಡಿ ಬಾಗಿಲು ಮುಚ್ಚಲಾಗುವುದು.