ನವದೆಹಲಿ: ರಾಷ್ಟ್ರ ರಾಜಧಾನಿಯ ಕರ್ತವ್ಯ ಪಥದಲ್ಲಿ ಕುಸ್ತಿಪಟು ವಿನೇಶ್ ಫೋಗಟ್ ಅವರು ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಯನ್ನು ತೊರೆದಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ರಾಷ್ಟ್ರದ ಕಾವಲುಗಾರ ಮತ್ತು ಅವರ ಕಡೆಯಿಂದ 'ಇಂತಹ ಕ್ರೌರ್ಯ'ವನ್ನು ನೋಡುವುದು ನೋವುಂಟುಮಾಡುತ್ತದೆ ಎಂದಿದ್ದಾರೆ.
ಕರ್ತವ್ಯ ಪಥದಲ್ಲಿನ ಫೋಗಟ್ ಅವರ ವಿಡಿಯೋವನ್ನು ಹಂಚಿಕೊಂಡಿರುವ ರಾಹುಲ್, 'ದೇಶದ ಪ್ರತಿಯೊಬ್ಬ ಹೆಣ್ಣು ಮಗಳಿಗೂ ಸ್ವಾಭಿಮಾನ ಮೊದಲು ಬರುತ್ತದೆ. ಅದರ ನಂತರವೇ ಯಾವುದೇ ಪದಕ ಅಥವಾ ಗೌರವ ಬರುತ್ತದೆ' ಎಂದಿದ್ದಾರೆ.
'ಘೋಷಿತ ಬಾಹುಬಲಿ'ಯಿಂದ ಪಡೆದ 'ರಾಜಕೀಯ ಲಾಭ'ದ ಬೆಲೆ ಈ ವೀರ ಹೆಣ್ಣುಮಕ್ಕಳ ಕಣ್ಣೀರನ್ನು ಮೀರಿದೆಯೇ?. ಪ್ರಧಾನಿ ರಾಷ್ಟ್ರದ ಕಾವಲುಗಾರ, ಅವರ ಕಡೆಯಿಂದ ಇಂತಹ ಕ್ರೌರ್ಯವನ್ನು ನೋಡುವುದು ನೋವುಂಟುಮಾಡುತ್ತದೆ' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ತಮ್ಮ ಸಾಧನೆಯನ್ನು ಗುರುತಿಸಿ ಸರ್ಕಾರ ನೀಡಿದ್ದ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಗಳನ್ನು ದೆಹಲಿಯ ಕರ್ತವ್ಯ ಪಥದಲ್ಲಿ ಇಟ್ಟು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿ ಪದಕ ಗೆದ್ದಿರುವ ವಿನೇಶ್ ಫೋಗಟ್ ಮರಳಿದ್ದಾರೆ. ಪ್ರಶಸ್ತಿಗಳನ್ನು ಹಿಂದಿರುಗಿಸಲು ಪ್ರಧಾನಿ ಕಚೇರಿಗೆ ತೆರಳಲು ಮುಂದಾಗಿದ್ದ ಅವರನ್ನು ದೆಹಲಿ ಪೊಲೀಸರು ತಡೆದ ನಂತರ ಪ್ರಶಸ್ತಿಗಳನ್ನು ಕರ್ತವ್ಯ ಪಥದ ಮಾರ್ಗದಲ್ಲಿಟ್ಟು ಮರಳಿದ್ದರು. ನಂತರ ಅವರನ್ನು ದೆಹಲಿ ಪೊಲೀಸರು ಎತ್ತಿಕೊಂಡರು.
ಡಬ್ಲ್ಯುಎಫ್ಐ ಅಧ್ಯಕ್ಷ ಸ್ಥಾನಕ್ಕೆ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಆಪ್ತ ಸಂಜಯ್ ಸಿಂಗ್ ಆಯ್ಕೆಗೆ ಪ್ರತಿಭಟನೆಯ ಸಂಕೇತವಾಗಿ ವಿನೇಶಾ ಅವರು ಪ್ರಶಸ್ತಿಗಳನ್ನು ಮರಳಿಸುವುದಾಗಿ ಘೋಷಿಸಿದ್ದರು.
ಒಲಿಂಪಿಕ್ ಪದಕ ವಿಜೇತರಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಅವರೊಂದಿಗೆ ಫೋಗಟ್ ಅವರು, ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಐ) ಅಧ್ಯಕ್ಷ ಸ್ಥಾನಕ್ಕೆ ಲೈಂಗಿಕ ಕಿರುಕುಳದ ಆರೋಪ ಹೊತ್ತಿದ್ದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಆಪ್ತ ಸಂಜಯ್ ಸಿಂಗ್ ಅವರ ಆಯ್ಕೆಯನ್ನು ವಿರೋಧಿಸಿದ್ದರು.