ನವದೆಹಲಿ: 'ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಆಗುವುದು ವಿಧಿಯ ತೀರ್ಮಾನ ಆಗಿತ್ತು. ವಿಧಿಯು ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಿದೆ' ಎಂದು ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಹೇಳಿದ್ದಾರೆ.
ರಾಷ್ಟ್ರಧರ್ಮ ನಿಯತಕಾಲಿಕೆಯಲ್ಲಿ ಬರೆದಿರುವ 'ಏಕ್ ದಿವ್ಯ ಸ್ವಪ್ನಕಿ ಪೂರ್ಣಿ' (ಒಂದು ದಿವ್ಯ ಸ್ವಪ್ನ ಪೂರ್ಣ) ವಿಶೇಷ ಲೇಖನದಲ್ಲಿ ಅವರು ರಾಮಮಂದಿರ ನಿರ್ಮಾಣಕ್ಕಾಗಿ 33 ವರ್ಷಗಳ ಹಿಂದೆ ನಡೆಸಿದ 'ರಥಯಾತ್ರೆ' ಬಗ್ಗೆ ಮೆಲುಕು ಹಾಕಿದ್ದಾರೆ.
'ರಾಮಮಂದಿರ ನಿರ್ಮಾಣಕ್ಕಾಗಿ 33 ವರ್ಷಗಳ ಹಿಂದೆ ಕೈಗೊಂಡಿದ್ದ ರಥಯಾತ್ರೆಯು ತಮ್ಮ ರಾಜಕೀಯ ಜೀವನದ 'ಅತ್ಯಂತ ನಿರ್ಣಾಯಕ ಮತ್ತು ಪರಿವರ್ತನೆಯ ಘಟನೆ ಆಗಿತ್ತು' ಎಂದು ಲೇಖನದಲ್ಲಿ ಅವರು ತಿಳಿಸಿದ್ದಾರೆ.
ಅಯೋಧ್ಯೆ ಚಳವಳಿಯು 'ಅತ್ಯಂತ ನಿರ್ಣಾಯಕ ಮತ್ತು ಪರಿವರ್ತನೆಯ ಘಟ್ಟ ಎಂಬುವುದು ನನ್ನ ನಂಬಿಕೆ. ಈ ಪ್ರಯಾಣವು ನನಗೆ ಭಾರತವನ್ನು ಮರು ಶೋಧಿಸಲು ಮತ್ತು ನನ್ನನ್ನು ತಾನು ಪುನಃ ಅರ್ಥಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಮಂದಿರ ನಿರ್ಮಾಣದ ಮೂಲಕ ದಿವ್ಯ ಸ್ವಪ್ನವೊಂದು ಪೂರ್ತಿಯಾದ ತೃಪ್ತಿ ಇದೆ ಎಂದು ಅವರು ಹೇಳಿದ್ದಾರೆ.
ರಾಮ ರಥಯಾತ್ರೆ 33 ವರ್ಷಗಳನ್ನು ಪೂರೈಸಿದೆ. 1990ರ ಸೆಪ್ಟೆಂಬರ್ 25 ರಂದು ಬೆಳಿಗ್ಗೆ ರಥಯಾತ್ರೆಯನ್ನು ಪ್ರಾರಂಭಿಸಿದಾಗ, ಭಗವಾನ್ ರಾಮನ ಮೇಲಿನ ನಂಬಿಕೆಯು ಒಂದು ಚಳುವಳಿಯ ಸ್ವರೂಪವನ್ನು ಪಡೆಯುತ್ತದೆ ಎಂದು ಭಾವಿಸಿರಲಿಲ್ಲ ಎಂದು ಅಡ್ವಾಣಿ ಹೇಳಿದ್ದಾರೆ
'76 ವರ್ಷದ ಹಿಂದಿ ನಿಯತಕಾಲಿಕೆ ರಾಷ್ಟ್ರ ಧರ್ಮ'ದ ವಿಶೇಷ ಆವೃತ್ತಿಗೆ ಬರೆದಿರುವ ಲೇಖನದಲ್ಲಿ, ರಥಯಾತ್ರೆಯ ಉದ್ದಕ್ಕೂ ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮೊಂದಿಗೆ ಇದ್ದರು. ಆಗ(ಮೋದಿ) ಅವರು ಹೆಚ್ಚು ಜನಪ್ರಿಯರಾಗಿರಲಿಲ್ಲ. ಆದರೆ ಆ ಸಮಯದಲ್ಲಿ ಭಗವಾನ್ ರಾಮನು ತನ್ನ ದೇವಾಲಯವನ್ನು ಮರುನಿರ್ಮಾಣ ಮಾಡಲು ತನ್ನ ಭಕ್ತನನ್ನು (ಮೋದಿ) ಆಯ್ಕೆ ಮಾಡಿದ್ದನು ಎಂದು ಅಡ್ವಾಣಿ ಬರೆದಿರುವುದಾಗಿ ಮೂಲವೊಂದು ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮನ ವಿಗ್ರಹವನ್ನು ಮಂದಿರದಲ್ಲಿ ಪ್ರತಿಷ್ಠಾಪಿಸಿದಾಗ, ಅವರು ದೇಶದ ಪ್ರತಿಯೊಬ್ಬ ನಾಗರಿಕರನ್ನು ಪ್ರತಿನಿಧಿಸುತ್ತಾರೆ. ಈ ಮೂಲಕ ದಮನಿತರ ಆಸೆಗಳು ಈಡೇರುತ್ತವೆ. ಶ್ರೀರಾಮನ ಸದ್ಗುಣಗಳನ್ನು ಅಳವಡಿಸಿಕೊಳ್ಳಲು ಎಲ್ಲಾ ಭಾರತೀಯರನ್ನು ಪ್ರೇರೇಪಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಜೊತೆಗೆ ಮಂದಿರ ಕನಸನ್ನು ಸಾಕಾರಗೊಳಿಸಿದ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಎಂದು ಅವರು ಹೇಳಿದ್ದಾರೆ.
ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯಲಿದೆ. ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ದೇಶದಾದ್ಯಂತದ ಸಾವಿರಾರು ಭಕ್ತರು ಮತ್ತು ಇತರ ಗಣ್ಯರನ್ನು ಆಹ್ವಾನಿಸಲಾಗಿದೆ.
ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಅಡ್ವಾಣಿ ಅವರು ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. ಅವರು ಬರೆದಿರುವ ಲೇಖನ ಜನವರಿ 16ರಂದು 'ರಾಷ್ಟ್ರ ಧರ್ಮ' ನಿಯತಕಾಲಿಕೆಯಲ್ಲಿ ಪ್ರಕಟವಾಗಲಿದೆ. ಅದರ ಪ್ರತಿಯನ್ನು ಮಂದಿರ ಉದ್ಘಾಟನೆಗೆ ಬರುವ ಭಕ್ತರಿಗೆ ಹಂಚಲಾಗುವುದು ಎಂದು ಮೂಲಗಳು ತಿಳಿಸಿವೆ.