ನವದೆಹಲಿ: 'ಪೂಜಿಸಲೆಂದೇ ಹೂಗಳ ತಂದೆ...' ಎಂಬ ಕನ್ನಡ ಹಾಡಿನ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
'ಕನ್ನಡದಲ್ಲಿ ಶಿವಶ್ರೀ ಸ್ಕಂದ ಪ್ರಸಾದ್ ಅವರ ಈ ನಿರೂಪಣೆಯು ಪ್ರಭು ಶ್ರೀರಾಮನ ಭಕ್ತಿಯ ಭಾವವನ್ನು ಸುಂದರವಾಗಿ ಎತ್ತಿ ತೋರಿಸುತ್ತದೆ. ಇಂತಹ ಪ್ರಯತ್ನಗಳು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ' ಎಂದು ಮೋದಿ ಬಣ್ಣಿಸಿದ್ದಾರೆ.
'ನನಗೆ ಇದು ತುಂಬಾ ಸಂತೋಷದ ಕ್ಷಣ. ನಾನು ಈಗ ಅನುಭವಿಸುತ್ತಿರುವ ಭಾವನೆಯನ್ನು ವಿವರಿಸಲು ಪದಗಳು ಸಾಲುತ್ತಿಲ್ಲ. ಇದು ಸ್ವತಃ ಶ್ರೀರಾಮನ ಆಶೀರ್ವಾದ...' ಎಂದು ಶಿವಶ್ರೀ ಪ್ರತಿಕ್ರಿಯಿಸಿದ್ದಾರೆ.
'ಎರಡು ಕನಸು' ಚಿತ್ರದ ಹಿಟ್ ಹಾಡು
'ಪೂಜಿಸಲೆಂದೇ ಹೂಗಳ ತಂದೆ...' ಇದು 1974ರಲ್ಲಿ ತೆರೆಕಂಡ ದೊರೆ-ಭಗವಾನ್ ನಿರ್ದೇಶನದ 'ಎರಡು ಕನಸು' ಸಿನಿಮಾದ ಹಾಡಾಗಿದೆ. ಚಿ. ಉದಯಶಂಕರ್ ಅವರು ಈ ಹಾಡಿಗೆ ಸಾಹಿತ್ಯ ಬರೆದರೆ, ಖ್ಯಾತ ಗಾಯಕಿ ಎಸ್. ಜಾನಕಿ ಅವರು ಹಿನ್ನೆಲೆ ಗಾಯನ ಮಾಡಿದ್ದಾರೆ. ಈ ಚಿತ್ರದಲ್ಲಿ ವರನಟ ರಾಜ್‌ಕುಮಾರ್, ಮಂಜುಳ, ಕಲ್ಪನಾ ಸೇರಿದಂತೆ ಪ್ರಮುಖರು ಅಭಿನಯಿಸಿದ್ದರು.