ನವದೆಹಲಿ: ಬಡವರು, ರೈತರು, ಮಹಿಳೆಯರು ಮತ್ತು ಯುವಕರು ಎಂಬ ನಾಲ್ಕು ಜಾತಿಗಳು ಸಬಲೀಕರಣಗೊಂಡಾಗ ಸಶಕ್ತ ಭಾರತ ನಿರ್ಮಾಣವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 'ಯೋಜನೆಗಳ ಪ್ರಯೋಜನಗಳು ದೇಶದಾದ್ಯಂತ ಎಲ್ಲಾ ಉದ್ದೇಶಿತ ಫಲಾನುಭವಿಗಳಿಗೆ ಕಾಲಮಿತಿಯಲ್ಲಿ ತಲುಪಿಸುವುದು ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಪ್ರಮುಖ ಉದ್ದೇಶವಾಗಿದೆ' ಎಂದು ತಿಳಿಸಿದರು.
ಯಾತ್ರೆ ಪ್ರಾರಂಭವಾದಾಗಿನಿಂದ ಸುಮಾರು 12 ಲಕ್ಷ ಹೊಸ ಉಜ್ವಲ ಯೋಜನೆ ಫಲಾನುಭವಿಗಳು ಉಚಿತ ಉಜ್ವಲ ಗ್ಯಾಸ್ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಅವರು ವಿವರಿಸಿದರು.
ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಬಡವರ ಪಾಲಿಗೆ ವರದಾನವಾಗಿದೆ. 'ಮೋದಿಯವರ ಗ್ಯಾರಂಟಿ ವಾಹನ' ದೇಶದ ಮೂಲೆ ಮೂಲೆಯನ್ನು ತಲುಪುತ್ತಿದೆ. ದೇಶದಲ್ಲಿ ಮಾತ್ರವಲ್ಲದೆ ವಿಶ್ವದೆಲ್ಲೆಡೆ 'ಮೋದಿ ಕಿ ಗ್ಯಾರಂಟಿ' ಚರ್ಚೆಯಾಗುತ್ತಿದೆ ಎಂದು ಮೋದಿ ಹೇಳಿದರು.
2023ರ ನವೆಂಬರ್ 15ರಂದು ಕಾರ್ಯಕ್ರಮ ಪ್ರಾರಂಭವಾದಾಗಿನಿಂದ, ಪ್ರಧಾನಿ ಮೋದಿ ಅವರು ದೇಶದಾದ್ಯಂತ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ನಾಲ್ಕು ಬಾರಿ ಸಂವಾದ ನಡೆಸಿದ್ದಾರೆ.
2024ರ ಜನವರಿ 5ರಂದು ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಸಂವಾದ ಕಾರ್ಯಕ್ರಮದಲ್ಲಿ 10 ಕೋಟಿ ಮಂದಿ ಭಾಗವಹಿಸುವ ಮೂಲಕ ಯಾತ್ರೆಯು ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ.