ಮುಂಬೈ (PTI): ಶಂಕರಾಚಾರ್ಯರನ್ನು ಟೀಕಿಸಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ನಾರಾಯಣ ರಾಣೆ ವಿರುದ್ದ ಮಹಾರಾಷ್ಟ್ರದ ವಿರೋಧ ಪಕ್ಷಗಳು ವಾಗ್ದಾಳಿ ನಡೆಸಿದ್ದು, ಕ್ಷಮೆ ಯಾಚಿಸುವಂತೆ ಭಾನುವಾರ ಆಗ್ರಹಿಸಿವೆ.
'ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ವಿಚಾರದಲ್ಲಿ ಶಂಕರಾಚಾರ್ಯರು ಅಪಸ್ವರ ಎತ್ತಿರುವುದು ಸರಿಯಲ್ಲ.
'ರಾಮ ಮಂದಿರ ನಿರ್ಮಿಸಲು ಇದುವರೆಗೆ ಯಾರಿಗೂ ಸಾಧ್ಯವಾಗಿರಲಿಲ್ಲ. ಮೋದಿ ನೇತೃತ್ವದಲ್ಲಿ ಬಿಜೆಪಿಯು ಮಂದಿರ ನಿರ್ಮಾಣ ಕೆಲಸ ಕೈಗೆತ್ತಿಕೊಂಡಿದೆ. ಶಂಕರಾಚಾರ್ಯರು ಈ ಕೆಲಸವನ್ನು ಟೀಕಿಸಬೇಕೇ ಅಥವಾ ಹರಸಬೇಕೇ? ಶಂಕರಾಚಾರ್ಯರು ಪ್ರಧಾನಿ ಮತ್ತು ಬಿಜೆಪಿಯ ಕೆಲಸವನ್ನು ರಾಜಕೀಯ ದೃಷ್ಟಿಯಿಂದ ನೋಡುತ್ತಿದ್ದಾರೆ ಎಂಬುದು ಇದರ ಅರ್ಥ. ರಾಮಮಂದಿರವನ್ನು ರಾಜಕೀಯದ ಆಧಾರದಲ್ಲಿ ನಿರ್ಮಿಸಿಲ್ಲ. ಧರ್ಮದ ಮೇಲೆ ನಿರ್ಮಿಸಲಾಗಿದೆ. ರಾಮ ನಮ್ಮ ದೇವರು' ಎಂದು ಠಾಣೆ ಹೇಳಿದ್ದರು.
'ಹಿಂದೂಗಳಿಗೆ ಮಾಡಿದ ಅವಮಾನ': ಶಂಕರಾಚಾರ್ಯರ ಕೊಡುಗೆಗಳನ್ನು ಪ್ರಶ್ನಿಸುವ ಮೂಲಕ ರಾಣೆ ಅವರು ಹಿಂದುತ್ವಕ್ಕೆ ಅವಮಾನ ಮಾಡಿದ್ದಾರೆ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಟೀಕಿಸಿದ್ದಾರೆ.
'ರಾಣೆ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿಯು ಜನವರಿ 22ರ ಒಳಗಾಗಿ (ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ದಿನ) ದೇಶದ ಜನರ ಕ್ಷಮೆಯಾಚಿಸಬೇಕು. ಪ್ರಧಾನಿ ಮೋದಿ ಅವರು ರಾಣೆ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು' ಎಂದು ಶನಿವಾರ ಆಗ್ರಹಿಸಿದರು.
ರಾಣೆ ಹೇಳಿಕೆ ಬಗ್ಗೆ ಬಿಜೆಪಿಯು ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಎನ್‌ಸಿಪಿ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ರಾಣೆ ವಿರುದ್ಧ ಮುಂಬೈನ ತಮ್ಮ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
'ನಾಲ್ವರು ಶಂಕರಾಚಾರ್ಯರಲ್ಲಿ ಇಬ್ಬರು ರಾಮನ ಮೂರ್ತಿ ಪ್ರತಿಷ್ಠಾಪನೆ ಸಮಾರಂಭವನ್ನು ಸ್ವಾಗತಿಸಿದ್ದಾರೆ. ಆದರೆ ಜನವರಿ 22ರ ಕಾರ್ಯಕ್ರಮದಲ್ಲಿ ನಾಲ್ವರು ಶಂಕರಾಚಾರ್ಯರೂ ಪಾಲ್ಗೊಳ್ಳುವುದಿಲ್ಲ. ಅವರ ಅನುಕೂಲಕ್ಕೆ ತಕ್ಕಂತೆ ಮುಂದೊಂದು ದಿನ ರಾಮಮಂದಿರಕ್ಕೆ ಭೇಟಿ ನೀಡಲಿದ್ದಾರೆ' ಎಂದು ವಿಎಚ್‌ಪಿ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಶುಕ್ರವಾರ ಹೇಳಿದ್ದರು.