ನವದೆಹಲಿ: ದೇಶವು ಪ್ರಗತಿಯ ಹೊಸ ಎತ್ತರವನ್ನು ತಲುಪಿದೆ. ಎಲ್ಲರನ್ನೂ ಒಳಗೊಂಡ ಮತ್ತು ಸರ್ವತೋಮುಖ ಅಭಿವೃದ್ಧಿಯ ಈ ಪಯಣ ಜನರ ಆಶೀರ್ವಾದದೊಂದಿಗೆ ಮುಂದುವರಿಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.
ನವದೆಹಲಿ: ದೇಶವು ಪ್ರಗತಿಯ ಹೊಸ ಎತ್ತರವನ್ನು ತಲುಪಿದೆ. ಎಲ್ಲರನ್ನೂ ಒಳಗೊಂಡ ಮತ್ತು ಸರ್ವತೋಮುಖ ಅಭಿವೃದ್ಧಿಯ ಈ ಪಯಣ ಜನರ ಆಶೀರ್ವಾದದೊಂದಿಗೆ ಮುಂದುವರಿಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.
ಬಜೆಟ್ ಅಧಿವೇಶನ ಆರಂಭಕ್ಕೂ ಮುನ್ನ ಮಾತನಾಡಿರುವ ಅವರು, ಕಲಾಪಗಳಿಗೆ ಅಡ್ಡಿಪಡಿಸುವ ವಿರೋಧ ಪಕ್ಷಗಳ ಸಂಸದರ ವಿರುದ್ಧ ಚಾಟಿ ಬೀಸಿದ್ದಾರೆ.
'ಗದ್ದಲ ಎಬ್ಬಿಸುವುದನ್ನು ಅಭ್ಯಾಸ ಮಾಡಿಕೊಂಡಿರುವ, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಹಾನಿ ಮಾಡುವಂತಹ ಗೌರವಾನ್ವಿತ ಸಂಸದರು ಕಳೆದ 10 ವರ್ಷಗಳಲ್ಲಿ ತಾವು ಮಾಡಿರುವುದು ಏನು ಎಂಬುದನ್ನು ಈ ಸಂಸತ್ತಿನ ಕೊನೇ ಅಧಿವೇಶನದಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕು' ಎಂದು ಕುಟುಕಿದ್ದಾರೆ.
'ದೇಶವು ಮುನ್ನಡೆಯುತ್ತಿದೆ ಮತ್ತು ಪ್ರಗತಿಯ ಹೊಸ ಎತ್ತರವನ್ನು ಮುಟ್ಟುತ್ತಿದೆ ಎಂದು ದೃಢವಾಗಿ ನಂಬಿದ್ದೇನೆ. ಎಲ್ಲರನ್ನೂ ಒಳಗೊಂಡ, ಸರ್ವತೋಮುಖ ಅಭಿವೃದ್ಧಿಗೆ ರಾಷ್ಟ್ರ ಸಾಕ್ಷಿಯಾಗಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಅವರು, 'ಹೊಸ ಸರ್ಕಾರ ರಚನೆಯಾದ ಬಳಿಕ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುವ ಸಂಪ್ರದಾಯವನ್ನು ಮುಂದುವರಿಸುತ್ತೇವೆ' ಎನ್ನುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೇರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 1ರಂದು ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು (ಜನವರಿ 31ರಂದು) ಉಭಯ ಸದನಗಳನ್ನುದ್ದೇಶಿಸಿ ಮಾತನಾಡುವುದರೊಂದಿಗೆ ಆರಂಭವಾಗಿರುವ ಬಜೆಟ್ ಅಧಿವೇಶನ, ಫೆಬ್ರುವರಿ 9ರ ವರೆಗೆ ನಡೆಯಲಿದೆ.
ಲೋಕಸಭೆ ಚುನಾವಣೆ ಬಳಿಕ ರಚನೆಯಾಗುವ ಹೊಸ ಸರ್ಕಾರವು ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದೆ.