ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ, ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಜೈತಾಪುರದಲ್ಲಿ 9,900 ಮೆಗಾವಾಟ್ ಸಾಮರ್ಥ್ಯದ ಅಣು ವಿದ್ಯುತ್ ಸ್ಥಾವರ ಸ್ಥಾಪಿಸುವುದಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಫ್ರಾನ್ಸ್ ನಡುವೆ ಮತ್ತೆ ಮಾತುಕತೆ ಶುರುವಾಗಿದೆ.
ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ, ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಜೈತಾಪುರದಲ್ಲಿ 9,900 ಮೆಗಾವಾಟ್ ಸಾಮರ್ಥ್ಯದ ಅಣು ವಿದ್ಯುತ್ ಸ್ಥಾವರ ಸ್ಥಾಪಿಸುವುದಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಫ್ರಾನ್ಸ್ ನಡುವೆ ಮತ್ತೆ ಮಾತುಕತೆ ಶುರುವಾಗಿದೆ.
ಉದ್ದೇಶಿತ ಸ್ಥಾವರ ಸ್ಥಾಪನೆಗೆ ಯಾವ ರೀತಿ ಹಣಕಾಸು ನೆರವು ಒದಗಿಸಬೇಕು, ಯಾವ ವಿಷಯಗಳ ಬಗ್ಗೆ ಒಪ್ಪಂದ ಮಾಡಿಕೊಳ್ಳಬೇಕು ಎಂಬ ಬಗ್ಗೆ ಉಭಯ ದೇಶಗಳು 15 ವರ್ಷಗಳ ಬಳಿಕ, ಚರ್ಚೆ ಆರಂಭಿಸಿವೆ.
'ಜೈತಾಪುರ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ವಿಷಯವನ್ನು ಕೈಬಿಡಲಾಗಿದೆಯೇ' ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರ, 'ಹಣಕಾಸು ನೆರವು, ಯಾವ ವಿಷಯಗಳು ಒಪ್ಪಂದದ ಭಾಗವಾಗಿರಬೇಕು ಎಂಬ ಬಗ್ಗೆ ಫ್ರಾನ್ಸ್‌ನ ಇಂಧನ ಸಂಸ್ಥೆ ಇಡಿಎಫ್ ಹಾಗೂ ಭಾರತೀಯ ಅಣುಶಕ್ತಿ ನಿಗಮ (ಎನ್‌ಪಿಸಿಐಎಲ್) ಚರ್ಚೆ ನಡೆಸುತ್ತಿವೆ' ಎಂದು ಹೇಳಿದ್ದಾರೆ.
'ಈ ಯೋಜನೆಯು ವೆಚ್ಚದ ದೃಷ್ಟಿಯಿಂದ ಕಾರ್ಯಸಾಧುವೇ ಎಂಬ ಬಗ್ಗೆ ಉಭಯ ಸಂಸ್ಥೆಗಳ ನಡುವೆ ಚರ್ಚೆ ನಡೆಯುತ್ತಿದೆ' ಎಂದೂ ಹೇಳಿದ್ದಾರೆ.
ಈ ಉದ್ದೇಶಿತ ಯೋಜನೆಗೆ ತಲಾ 1,650 ಮೆಗಾವಾಟ್ ಸಾಮರ್ಥ್ಯದ ಆರು ರಿಯಾಕ್ಟರ್‌ಗಳನ್ನು (ಯುರೋಪಿಯನ್ ಪ್ರೆಜರೈಸ್ಡ್ ರಿಯಾಕ್ಟರ್) ಪೂರೈಸಲು ಫ್ರಾನ್ಸ್ ಕಂಪನಿ ಇಡಿಎಫ್ ಇಂಗಿತ ವ್ಯಕ್ತಪಡಿಸಿದೆ. ಇವು ಅತ್ಯಾಧುನಿಕ ರಿಯಾಕ್ಟರ್‌ಗಳು ಎಂದೇ ಪರಿಗಣಿಸಲಾಗುತ್ತಿದೆ.
ಜೈತಾಪುರದಲ್ಲಿ ಈ ಸ್ಥಾವರ ಸ್ಥಾಪಿಸುವುದಕ್ಕೆ ಸಂಬಂಧಿಸಿ ಫ್ರಾನ್ಸ್ ಮೂಲದ ಕಂಪನಿ ಅರೆವಾ ಜೊತೆ ಮೊದಲ ಬಾರಿಗೆ 2009ರಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಆದರೆ, ಅರೆವಾ ಕಂಪನಿ ದಿವಾಳಿಯಾದ ಕಾರಣ ಯೋಜನೆ ಅನುಷ್ಠಾನಕ್ಕೆ ಹಿನ್ನಡೆಯಾಗಿತ್ತು.
2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಸಮ್ಮುಖದಲ್ಲಿ ಇಡಿಎಫ್ ಮತ್ತು ಎನ್‌ಪಿಸಿಐಎಲ್, ಪರಿಷ್ಕೃತ ಒಪ್ಪಂದಕ್ಕೆ ಸಹಿ ಹಾಕಿದ್ದವು.