ಚಹಾ ಇಲ್ಲದ ದಿನ ನಮ್ಮಿಂದಿನ ಬದುಕಲ್ಲಿ ಸಾಧ್ಯವೇ? ಅನೇಕರು ಹಾಸಿಗೆಯಿಂದ ಎದ್ದೇಳುವಾಗಲೇ ಚಹಾ ಬೇಕಾಗುತ್ತದೆ. ನಿತ್ಯವೂ ಹಾಲು ಬೆರೆಸಿದ ಟೀ ಕುಡಿದು ಬೇಸತ್ತವರು ಅಥವಾ ಬೇರೆ ಬೇರೆ ಟೀ ಕುಡಿಯಲು ಬಯಸುವವರು ಟ್ರೈ ಮಾಡಬಹುದಾದ ಟೀ 'ತೆಂಗಿನ ಹಾಲು ಟೀ'.
ಹೆಸರೇ ಸೂಚಿಸುವಂತೆ, ಚಹಾದ ಮುಖ್ಯ ಸೇರ್ಪಡೆಗೊಳ್ಳುವ ಅತಿಥಿ ತೆಂಗಿನ ಹಾಲು. ಈ ಆರೋಗ್ಯಕರ ಚಹಾವು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ತೆಂಗಿನ ಹಾಲಿನಲ್ಲಿ ಫೈಬರ್, ವಿಟಮಿನ್ ಸಿ, ಇ, ಬಿ೧, ಬಿ೩, ಬಿ೫ ಮತ್ತು ಬಿ೬ ಇರುತ್ತದೆ. ಈ ಚಹಾವು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎನ್ನಲಾಗಿದೆ. ತೆಂಗಿನಕಾಯಿಯಲ್ಲಿ ಫೈಬರ್ ಸಮೃದ್ಧವಾಗಿದೆ. ವಾಸ್ತವವಾಗಿ, ಇದು ೬೧ ಪ್ರತಿಶತ ಫೈಬರ್ ಅನ್ನು ಹೊಂದಿರುತ್ತದೆ. ಫೈಬರ್ ಹೊಟ್ಟೆಯ ಆರೋಗ್ಯ ಮತ್ತು ಜೀರ್ಣಕ್ರಿಯೆಗೆ ಒಳ್ಳೆಯದು. ಮಲಬದ್ಧತೆಯಂತಹ ಸಮಸ್ಯೆಗಳಿಗೂ ಇದು ತುಂಬಾ ಸಹಕಾರಿ. ಅಸಿಡಿಟಿ, ಎದೆಯುರಿ ಮುಂತಾದ ಹಲವು ಸಮಸ್ಯೆಗಳಿಗೂ ತೆಂಗಿನಕಾಯಿಯಲ್ಲಿ ಪರಿಹಾರವಿದೆ.
ಆರೋಗ್ಯಕರ ತೆಂಗಿನ ಹಾಲಿನ ಚಹಾವನ್ನು ಹೇಗೆ ತಯಾರಿಸುವುದು:
* ಒಂದು ಪಾತ್ರೆಯಲ್ಲಿ ಎರಡು ಲೋಟ ನೀರು ಕುದಿಸಿ
* ನೀರು ಬಿಸಿಯಾದಾಗ ರುಬ್ಬಿದ ಎರಡು ಏಲಕ್ಕಿಯನ್ನು ಹಾಕಿ
* ನಂತರ ಸಾಕಷ್ಟು ಸಕ್ಕರೆ ಸೇರಿಸಿ.
* ನೀರು ಚೆನ್ನಾಗಿ ಕುದಿಯುತ್ತಿರುವಾಗ ಅದಕ್ಕೆ ಎರಡು ಚಮಚ ಟೀ ಪುಡಿ ಹಾಕಿ ಕುದಿಸಿ
* ಬಳಿಕ ಅದಕ್ಕೆ ಒಂದು ಲೋಟ ತೆಂಗಿನ ಹಾಲನ್ನು ಸುರಿದು ಬೆರೆಸಿ ಸೋಸಿದರೆ ತೆಂಗಿನ ಹಾಲಿನ ಟೀ ರೆಡಿ. ತೆಂಗಿನ ಹಾಲು ಸುರಿದ ನಂತರ ಚಹಾ ಕುದಿಯದಂತೆ ಎಚ್ಚರಿಕೆ ವಹಿಸುವುದೂ ಮುಖ್ಯ.
ಆದರೆ, ಮಾಡಿನೋಡಿ. ನಮಗೂ ಕಳಿಸಿ!