ಪಣಜಿ: ತನ್ನ ನಾಲ್ಕು ವರ್ಷದ ಮಗುವನ್ನು ಕೊಂದ ಆರೋಪ ಹೊತ್ತಿರುವ ಕೃತಕ ಬುದ್ಧಿಮತ್ತೆಯ ನವೋದ್ಯಮ 'ಮೈಂಡ್‌ಫುಲ್ ಎ.ಐ ಲ್ಯಾಬ್'ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಚನಾ ಸೇಠ್ (39) ಅವರನ್ನು ಶುಕ್ರವಾರ ಗೋವಾ ಪೊಲೀಸರು ಅಪರಾಧ ದೃಶ್ಯದ ಮರುಸೃಷ್ಟಿಗಾಗಿ ಆಕೆ ತಂಗಿದ್ದ ಸರ್ವೀಸ್ ಅಪಾರ್ಟ್‌ಮೆಂಟ್‌ಗೆ ಕರೆದೊಯ್ಯಲಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ಸುಚನಾ ತನ್ನ ಪುತ್ರನೊಂದಿಗೆ ಜನವರಿ 6ರಿಂದ 8ರವರೆಗೆ ಉಳಿದುಕೊಂಡಿದ್ದರು. ಮಗು ಕೊಂದು ಶವವನ್ನು ಬ್ಯಾಗ್‌ನಲ್ಲಿ ತುಂಬಿ ಕಾರಿನಲ್ಲಿ ಬೆಂಗಳೂರಿನತ್ತ ಸಾಗಿಸುತ್ತಿದ್ದಾಗ ಚಿತ್ರದುರ್ಗದ ಐಮಂಗಲ ಠಾಣೆಯ ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದರು.
'ಪ್ರಕರಣದ ತನಿಖೆಯ ಭಾಗವಾಗಿ ಕೃತ್ಯ ಯಾವ ರೀತಿ ನಡೆದಿರಬಹುದು ಎನ್ನುವುದನ್ನು ತಿಳಿಯಲು ಅಪರಾಧ ಕೃತ್ಯ ದೃಶ್ಯ ಮರು ಸೃಷ್ಟಿ ನಡೆಸುವ ಅಗತ್ಯವಿದೆ' ಎಂದು ಅಧಿಕಾರಿ ಹೇಳಿದ್ದಾರೆ.
'ಪೊಲೀಸ್ ಕಸ್ಟಡಿಯಲ್ಲಿರುವ ಸುಚನಾ ವಿಚಾರಣೆ ವೇಳೆ ತನ್ನ ಮುರಿದ ದಾಂಪತ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ಆದರೆ, ಕೊಲೆಯ ಕೃತ್ಯದ ಹಿಂದಿನ ಉದ್ದೇಶದ ಬಗ್ಗೆ ಬಾಯಿ ಬಿಟ್ಟಿಲ್ಲ. ಆಕೆಯ ಮಾನಸಿಕ ಸ್ಥಿತಿಯನ್ನು ನಿರ್ಣಯಿಸಲು ಮತ್ತು ಘೋರ ಅಪರಾಧದ ಉದ್ದೇಶ ಪತ್ತೆಹಚ್ಚುವ ಸಲುವಾಗಿ ಆಕೆಯನ್ನು ಮಾನಸಿಕ ಪರೀಕ್ಷೆಗೆ ಒಳಪಡಿಸಲಾಯಿತು. ತನಿಖೆ ಮುಂದುವರಿದಿದೆ' ಎಂದು ಅಧಿಕಾರಿ ಹೇಳಿದರು.
ಸುಚನಾ ಸೇಠ್ ತಂಗಿದ್ದ ಕೊಠಡಿಯಲ್ಲಿ ಕೆಮ್ಮಿನ ಸಿರಪ್‌ನ ಎರಡು ಖಾಲಿ ಬಾಟಲಿಗಳು ಪತ್ತೆಯಾಗಿದ್ದು, ಪೂರ್ವ ಯೋಜಿತವಾಗಿ ಮಗು ಕೊಲಲ್ಲು ಆಕೆ ಮಗುವಿಗೆ ಹೆಚ್ಚಿನ ಪ್ರಮಾಣದಲ್ಲಿ ಸಿರಪ್ ನೀಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.