ತಿರುವಂತನಂತಪುರ: ಪದ್ಮ ಪ್ರಶಸ್ತಿ ಘೋಷಣೆ ಮಾಡುವಾಗ ಖ್ಯಾತ ನಟ ಮಮ್ಮುಟ್ಟಿ ಸೇರಿದಂತೆ ರಾಜ್ಯದ ಪ್ರತಿಭಾವಂತ ವ್ಯಕ್ತಿಗಳನ್ನು ಕಡೆಗಣಿಸಲಾಗಿದೆ ಎಂದು ವಿರೋಧ ಪಕ್ಷದ ನಾಯಕ ವಿ. ಡಿ. ಸತೀಶನ್ ಆರೋಪಿಸಿದ್ದಾರೆ. ಖ್ಯಾತ ಸಾಹಿತಿಗಳಾದ ಟಿ. ಪದ್ಮನಾಭನ್, ಎಂ. ಕೆ. ಸಾನು, ಸಾರಾ ಜೋಸೆಫ್, ಗಾಯಕಿ ಸುಜಾತಾ ಮೋಹನ್, ಕವಿ ಶ್ರೀಕುಮಾರನ್ ಥಂಪಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವ್ಯಕ್ತಿಗಳ ಹೆಸರನ್ನು ಪಟ್ಟಿ ಮಾಡಿರುವ ಸತೀಶನ್, ಇವರುಗಳಿಗೆ ದೇಶದ ಅತ್ಯುನ್ನತ ಗೌರವ ನೀಡದಿರುವ ಕುರಿತು ಸಾಮಾಜಿಕ ಮಾಧ್ಯಮ ಫೇಸ್ ಬುಕ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
'ನಟರಾದ ಚಿರಂಜೀವಿ ಅವರಿಗೆ ಪದ್ಮವಿಭೂಷಣ, ಮಿಥುನ್ ಚಕ್ರವರ್ತಿ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ ಎಂಬ ಸುದ್ದಿ ಓದಿದಾಕ್ಷಣ ನನಗೆ ಮಮ್ಮುಟಿ ಅವರ ನೆನಪಾಯಿತು. ಪದ್ಮಭೂಷಣ ಅಥವಾ ಪದ್ಮವಿಭೂಷಣಕ್ಕೆ ನಟರ ಹೆಸರನ್ನು ಪರಿಗಣಿಸುವುದಾದರೇ ಅದರಲ್ಲಿ ಮೊದಲ ಹೆಸರೇ ಮಮ್ಮುಟಿದಾಗಿರಬೇಕು. ಅದರಲ್ಲಿ ಯಾವುದೇ ಸಂದೇಹ ಬೇಡ' ಎಂದರು.
'ತಮ್ಮ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿರುವ ವ್ಯಕ್ತಿಗಳು, ಉದಾತ್ತ ಚಿಂತಕರು, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿಹಿಡಿದ ಹಲವಾರು ವ್ಯಕ್ತಿಗಳು ನಮ್ಮ ನಡುವೆ ಇದ್ದಾರೆ. ಆದರೆ ಅಂತಹ ವ್ಯಕ್ತಿಗಳನ್ನು ಗುರುತಿಸಿ ಪದ್ಮ ಪ್ರಶಸ್ತಿಗಳನ್ನು ನೀಡುವಲ್ಲಿ ವಿಫಲರಾಗಿದ್ದೇವೆ. ಅರ್ಹರಿಗೆ ಪ್ರಶಸ್ತಿ ದೊರೆತಾಗ ಅವುಗಳ ಮೌಲ್ಯ ಇನ್ನಷ್ಟು ಹೆಚ್ಚುತ್ತದೆ' ಎಂದು ವಿಷಾದ ವ್ಯಕ್ತಪಡಿಸಿದರು.
ಈ ಬಾರಿ ಪದ್ಮ ಪ್ರಶಸ್ತಿಗೆ ಕೇರಳದಿಂದ ಹಿರಿಯ ಬಿಜೆಪಿ ನಾಯಕ ಓ. ರಾಜಗೋಪಾಲ್ ಮತ್ತು ರಾಜಮನೆತನದ ಸದಸ್ಯೆ ಅಶ್ವತಿ ತಿರುನಾಳ್ ಗೌರಿ ಲಕ್ಷ್ಮಿ ಬಾಯಿ ಅವರನ್ನು ಆಯ್ಕೆ ಮಾಡಲಾಗಿದೆ.