ವಾಷಿಂಗ್ಟನ್: ಐವಾ ಕಾಕಸಸ್‌ನಲ್ಲಿ ಹಿನ್ನಡೆ ಅನುಭವಿಸಿದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿಯವರು ಘೋಷಿಸಿದ್ದಾರೆ. ಅಲ್ಲದೆ ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.
'ನಾನು ಎಲ್ಲಾ ರೀತಿಯಲ್ಲೂ ನೋಡಿದೆ.
ನಮಗೆ ಗುರಿ ತಲುಪಲು ಆಗಲಿಲ್ಲ. ಈ ಕ್ಷಣದಿಂದ ಅಧ್ಯಕ್ಷೀಯ ಪ್ರಚಾರವನ್ನು ಮೊಟಕುಗೊಳಿಸುತ್ತಿದ್ದೇನೆ. ಮುಂದಿನ ಅಧ್ಯಕ್ಷನಾಗಲು ನನಗೆ ಯಾವುದೇ ಮಾರ್ಗವಿಲ್ಲ' ಎಂದು 38 ವರ್ಷದ ರಾಮಸ್ವಾಮಿ ಅವರು ರಿಪಬ್ಲಿಕನ್ ಅಧ್ಯಕ್ಷೀಯ ಸಭೆಯ ಫಲಿತಾಂಶಗಳು ಬರುತ್ತಿದ್ದಂತೆ ಐವಾದಲ್ಲಿ ನಿರಾಶೆಗೊಂಡ ಬೆಂಬಲಿಗರೊಂದಿಗೆ ಹೇಳಿದರು.
ಬಯೋಟೆಕ್ ಉದ್ಯಮಿಯಾಗಿರುವ ವಿವೇಕ್, ರಿಪಬ್ಲಿಕನ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಕಳೆದ ವರ್ಷ ಫೆಬ್ರುವರಿಯಲ್ಲಿ ಘೋಷಣೆ ಮಾಡಿದ್ದರು. ಆದರೆ ಐವಾ ಕಾಕಸಸ್‌ನಲ್ಲಿ ಕಡಿಮೆ ಮತ ಪಡೆದು ನಿರಾಸೆ ಅನುಭವಿಸಿದರು. ಶೇ 7.7ರಷ್ಟು ಮತ ಪಡೆಯುವ ಮೂಲಕ ನಾಲ್ಕನೇ ಸ್ಥಾನ ಪಡೆದರು.
ಶೇ 50ಕ್ಕೂ ಅಧಿಕ ಮತಗಳನ್ನು ಪಡೆಯುವ ಮೂಲಕ ಐವಾ ಕಾಕಸಸ್ ಅನ್ನು ಡೊನಾಲ್ಡ್ ಪ್ರಂಪ್ ಗೆದ್ದರು. ಫ್ಲೊರಿಡಾ ಗವರ್ನರ್ ರಾನ್ ಡಿ ಸಾಂಟಿಸ್ ಎರಡನೇ ಸ್ಥಾನಲ್ಲಿದ್ದು, ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಮೂರನೇ ಸ್ಥಾನ ಪಡೆದರು.
ಫಲಿತಾಂಶದ ಬಳಿಕ ಡೊನಾಲ್ಡ್ ಟ್ರಂಪ್ ಅವರಿಗೆ ಅಭಿನಂದನೆ ಸಲ್ಲಿಸಿದ ವಿವೇಕ್ ರಾಮಸ್ವಾಮಿ, ಅಧ್ಯಕ್ಷ ಸ್ಥಾನಕ್ಕೆ ಟ್ರಂಪ್ ಅವರನ್ನು ಅನುಮೋದಿಸುತ್ತೇನೆ ಎಂದು ಹೇಳಿದರು.
ಮುಂದಿನ ಕಾಕಸಸ್ ಜ.23ರಂದು ನ್ಯೂ ಹೆಮಿಸ್ಪಿಯರ್‌ನಲ್ಲಿ ನಡೆಯಲಿದ್ದು, ಅಲ್ಲಿ ಅವರು ಟ್ರಂಪ್ ಪರ ಪ್ರಚಾರ ನಡೆಸುವ ಸಾಧ್ಯತೆ ಇದೆ.
ರಾಮಸ್ವಾಮಿ ಮೂಲತಃ ಕೇರಳದವರಾಗಿದ್ದು, ಅವರ ಪೋಷಕರು ಕೆಲಸಕ್ಕೆಂದು ಅಮೆರಿಕದ ಒಹಿಯೊಗೆ ತೆರಳಿದ್ದರು. ನಿಕ್ಕಿ ಹ್ಯಾಲೆ ಬಳಿಕ ರಿಪಬ್ಲಿಕನ್‌ನ ಅಧ್ಯಕ್ಷೀಯ ರೇಸ್‌ನಲ್ಲಿದ್ದ ಎರಡನೇ ಭಾರತೀಯ ಸಂಜಾತ ಎಂಬ ಹೆಗ್ಗಳಿಕೆ ಇವರದ್ದು.