ಕಾಸರಗೋಡು: ನಿರ್ಗತಿಕರಿಗೆ ಮತ್ತು ಹಿಂದುಳಿದವರಿಗೆ ಆಶಾಕಿರಣ ಮೂಡಿಸುವ ರೀತಿಯ ಯೋಜನೆಗಳೊಂದಿಗೆ ಸರ್ಕಾರ ಮುನ್ನಡೆಯುತ್ತಿರುವುದಾಗಿ ನೋಂದಣಿ, ವಸ್ತು ಸಂಗ್ರಹಾಲಯ, ಪ್ರಾಚ್ಯವಸ್ತು ಖಾತೆ ಸಚಿವ ಕಡನ್ನಪಳ್ಳಿ ರಾಮಚಂದ್ರನ್ ತಿಳಿಸಿದ್ದಾರೆ.
ಅವರು ಚಿತ್ತಿಲಪಿಲ್ಲಿ ಫೌಂಡೇಶನ್ ಲೈಫ್ ವಸತಿ ಯೋಜನೆಯಲ್ಲಿ ಒಳಗೊಂಡ ಭೂರಹಿತರ ಪುನರ್ವಸತಿಗಾಗಿ 68 ಮಂದಿ ಫಲಾನುಭವಿಗಳಿಗೆ ಭೂಮಿ ಖರೀದಿಗಾಗಿ ಆರ್ಥಿಕ ನೆರವು ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾಸರಗೋಡು ಜಿಲ್ಲೆಯಲ್ಲಿ 14,216 ಮನೆಗಳನ್ನು ನಿರ್ಮಿಸಲಾಗಿದ್ದು, ಇದುವರೆಗೆ ರಾಜ್ಯ ಮಟ್ಟದಲ್ಲಿ 3,67,867 ಜೀವನ ಗೃಹಗಳ ನಿರ್ಮಾಣ ಪೂರ್ಣಗೊಂಡಿದೆ ಎಂದು ಸಚಿವರು ಹೇಳಿದರು. ಈ ಸಂದರ್ಭ ಫಲಾನುಭವಿಗಳಿಗೆ ಸಚಿವರು ಚೆಕ್ ಹಸ್ತಾಂತರಿಸಿದರು.
ಜಿಲ್ಲಾ ಯೋಜನಾ ಸಮಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಎನ್.ಎ ಎನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಮುಕ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಗ್ರಾಮ ಪಂಚಾಯಿತಿ ಸಂಘದ ಜಿಲ್ಲಾ ಕಾರ್ಯದರ್ಶಿ ಎ.ಪಿ ಉಷಾ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಸ್ಥಿತರಿದ್ದರು. ನವಕೇರಳ ಮಿಷನ್ ಜಿಲ್ಲಾ ಸಂಯೋಜಕ ಕೆ.ಬಾಲಕೃಷ್ಣನ್ ಸ್ವಾಗತಿಸಿದರು. ಜೀವನ ಸಂಯೋಜಕ ಎಂ. ವ್ಯಾಟ್ಸನ್ ವರದಿ ಮಂಡಿಸಿದರು.