ಕೊಚ್ಚಿ: ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಷೋ ಆರಂಭಕ್ಕೂ ಮುನ್ನ ಇಲ್ಲಿನ ಸರ್ಕಾರಿ ಕಾನೂನು ಕಾಲೇಜಿನ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೇರಳ ವಿದ್ಯಾರ್ಥಿ ಸಂಘದ (ಕೆಎಸ್‌ಯು) ಕಾರ್ಯಕರ್ತರು 'ಮೋದಿ ಗೋ ಬ್ಯಾಕ್' (ಮೋದಿ ಹಿಂದಿರುಗಿ) ಎಂದು ಬ್ಯಾನರ್ ಹಾಕಿ, ಪ್ರತಿಭಟನೆಯಲ್ಲಿ ತೊಡಗಿದ್ದು ಇದಕ್ಕೆ ಕಾರಣ.
ಪ್ರಧಾನಿ ಮೋದಿ ಅವರ ರೋಡ್ ಷೋ ಕಾಲೇಜಿನ ಮುಂಭಾಗ ಸಾಗಲಿದ್ದ ಕಾರಣ, ದೊಡ್ಡ ಪ್ರಮಾಣದಲ್ಲಿ ಬಿಜೆಪಿ ಬೆಂಬಲಿಗರು ಅಲ್ಲಿ ಜಮಾಯಿಸಿದ್ದರು. ಕಾಲೇಜಿನ ಆವರಣದಲ್ಲಿ ಕೆಎಸ್‌ಯು ಹಾಕಿದ್ದ ಬ್ಯಾನರ್ ನೋಡಿ ಕುಪಿತಗೊಂಡ ಬಿಜೆಪಿ ಬೆಂಬಲಿಗರು ಕಾಲೇಜಿನ ಗೇಟಿನತ್ತ ಧಾವಿಸಿದರು. ಆದರೆ ಅವರನ್ನು ಸಮಾಧಾನಪಡಿಸಿ ಪೊಲೀಸರು ಹಿಂದಕ್ಕೆ ಕಳುಹಿಸಿದರು. ಕೂಡಲೇ ಪೊಲೀಸರು ಬ್ಯಾನರ್ ಅನ್ನು ತೆರವುಗೊಳಿಸಿ, ಪರಿಸ್ಥಿತಿ ಶಾಂತಗೊಳಿಸಿದರು.
ಕೆಎಸ್‌ಯು ಕಾರ್ಯಕರ್ತರು ವಶಕ್ಕೆ: ಈ ವೇಳೆ ಪ್ರತಿಭಟನೆಯಲ್ಲಿ ತೊಡಗಿದ್ದ ಕೆಎಸ್‌ಯುನ ಕೆಲ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಪ್ರಧಾನಿ ವಿರುದ್ಧ ಪ್ರತಿಭಟಿಸಲು ಕೆಎಸ್‌ಯು ಕಾರ್ಯಕರ್ತರಿಗೆ ಪೊಲೀಸರು ಅವಕಾಶ ನೀಡಿದ್ದಾರೆ ಎಂದು ಬಿಜೆಪಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು. ಕೆಲವರು ಆರ್‌ಎಸ್‌ಎಸ್‌ನ ಶಕ್ತಿಯನ್ನು ತೋರಿಸುವುದಾಗಿ ಬೆದರಿಕೆ ಹಾಕಿದರು.