ಕಾಸರಗೋಡು: ಕೆಎಸ್ಸಾರ್ಟಿಸಿ ಬಸ್ ತಡೆದು ಬಸ್ಸಿಗೆ ಹಾನಿಗೊಳಿಸಿರುವುದಲ್ಲದೆ, ಸಿಬ್ಬಂದಿಗೆ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ನೀಲೇಶ್ವರ ಠಾ£ಣೆ ಪೊಲೀಸರು ಬಂಧಿಸಿದ್ದಾರೆ. ರಾಮಂತಳಿ ನಿವಾಸಿ ಹಂಸಾ, ಕುನ್ನುಂಗೈ ನಿವಾಸಿ ದೀಪಕ್‍ದಿನೇಶ್ ಹಾಗೂ ವೆಸ್ಟ್‍ಎಳೇರಿ ನಿವಾಸಿ ಕೆ.ಆರ್ ಪ್ರವೀಣ್ ಬಂಧಿತರು. ಇವರ ವಿರುದ್ಧ ನರಹತ್ಯಾ ಯತ್ನ ಸೇರಿದಂತೆ ವಿವಿಧ ಸೆಕ್ಷನ್ ಅನ್ವಯ ಕೇಸು ದಾಖಲಿಸಲಾಗಿದೆ.
ಕಾಸರಗೋಡಿನಿಂದ ಕೋಟ್ಟಾಯಂಗೆ ಸಂಚರಿಸುತ್ತಿದ್ದ 'ಮಿಂಚಿನ ಸೇವೆ'ಬಸ್‍ಗೆ ತಂಡ ಹೊಸದುರ್ಗ ಸೌತ್ ಬಳಿ ನಿಲುಗಡೆಗಾಗಿ ಕೈತೋರಿಸಿದ್ದು, ಈ ಪ್ರದೇಶದಲ್ಲಿ ನಿಲುಗಡೆಯಿಲ್ಲದಿರುವುದರಿಂದ ಬಸ್ ಮುಂದೆ ಸಾಗಿತ್ತು. ಬಸ್ ನೀಲೇಶ್ವರ ಮಾರ್ಕೆಟ್ ಬಳಿ ತಲುಪುತ್ತಿದ್ದಂತೆ ಕಾರಿನಲ್ಲಿ ಹಿಂಬಾಲಿಸಿ ಬಂದ ತಂಡ ಬಸ್ಸಿಗೆ ಹಾನಿಗೈದು, ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರನ್ನೂ ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೊಳಪಡಿಸಿದ್ದಾರೆ. ಈ ಸಂದರ್ಭ ತಂಡ ಅಮಲುಪದಾರ್ಥ ಸೇವಿಸಿರುವುದು ಸಾಬೀತಾಗಿತ್ತು. ಆರೋಪಿಗಳು ಸಂಚಾರಕ್ಕೆ ಬಳಸಿದ್ದ ಕಾರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.