ಬದಿಯಡ್ಕ: ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಕಳೆದ ಬುಧವಾರ ಆರಂಭಗೊಂಡ ಶ್ರೀಮದ್ ಭಾಗವತ ಸಪ್ತಾಹ ಮಂಗಳವಾರ ಮಧ್ಯಾಹ್ನ ಸಮಾರೋಪಗೊಂಡಿತು. ಜೀರ್ಣೋದ್ಧಾರ ಕಾರ್ಯದಂಗವಾಗಿ ನಡೆದ ಪ್ರಶ್ನೆಚಿಂತನೆಯಲ್ಲಿ ಕಂಡುಬಂದ ಪ್ರಕಾರ ನಿವೃತ್ತಿಕಾರ್ಯಗಳು ನಡೆದುಬರುತ್ತಿದ್ದು, ಇದರಂಗವಾಗಿ ಭಾಗವತ ಸಪ್ತಾಹ ನಡೆಯಿತು. ಬ್ರಹ್ಮಶ್ರೀ ವೇದಮೂರ್ತಿ ಕಿಳಿಂಗಾರು ಶಿವಶಂಕರ ಭಟ್ ಪೂಜೆ ನೆರವೇರಿಸಿ ಶ್ರೀದೇವರ ಪ್ರಸಾದವನ್ನು ನೀಡಿ ಆಶೀರ್ವದಿಸಿದರು. ಬ್ರಹ್ಮಶ್ರೀ ವೇದಮೂರ್ತಿ ನಾಗೇಂದ್ರ ಭಟ್ ಪಾರಾಯಣ ನಡೆಸಿಕೊಟ್ಟರು. ಹಿರಿಯರಿಗೆ ಮೋಕ್ಷ ಪ್ರಾಪ್ತಿಗಾಗಿ ಪುರಾಣದಲ್ಲೇ ಭಾಗವತ ಸಪ್ತಾಹದ ಉಲ್ಲೇಖವಿದೆ. ಭಾಗವತವನ್ನು ಯಾರು ಶ್ರದ್ಧೆಯಿಟ್ಟು ಕೇಳುತ್ತಾನೋ ಆತನಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಭಕ್ತಿ ಶ್ರದ್ಧೆಯಿಂದ ದೇವತಾ ಕಾರ್ಯವನ್ನು ಮಾಡಿದಾಗ ಅಲ್ಲಿ ಸಾತ್ವಿಕ ಚಿಂತನೆಗಳು ಮೂಡಿಬರಲು ಸಾಧ್ಯವಿದೆ ಎಂದು ಅವರು ಪುರಾಣದ ಕಥೆಗಳ ವಿವರಣೆಯೊಂದಿಗೆ ಪಾರಾಯಣವನ್ನು ನಡೆಸಿಕೊಟ್ಟರು. ಮಧ್ಯಾಹ್ನ ಶ್ರೀ ಶಂಕರನಾರಾಯಣ ದೇವರ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಿತು. ಆಡಳಿತ ಮೊಕ್ತೇಸರ ಶಂಕರನಾರಾಯಣ ಶರ್ಮ ದಂಪತಿಗಳ ನೇತೃತ್ವದಲ್ಲಿ ಪೂಜೆ ನಡೆಯಿತು. ಊರಪರವೂರ ಭಕ್ತಾದಿಗಳು ಪಾಲ್ಗೊಂಡಿದ್ದರು.