ಹೈದರಾಬಾದ್: ಕಡಲ್ಗಳ್ಳರ ಹಾವಳಿಗೆ ಕಡಿವಾಣ ಹಾಕಲು ಭಾರತೀಯ ನೌಕಾ ಪಡೆಯು ನೌಕೆಗಳನ್ನು ನಿಯೋಜಿಸಲಿದೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಹರಿಕುಮಾರ್ ಬುಧವಾರ ಹೇಳಿದ್ದಾರೆ.
ದೇಶೀಯವಾಗಿ ನಿರ್ಮಿಸಿರುವ ಮಾನವರಹಿತ ವೈಮಾನಿಕ ವಾಹನ (ಯುಎವಿ) 'ದೃಷ್ಟಿ 10 ಸ್ಟಾರ್‌ಲೈನರ್' ಅನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಇಸ್ರೇಲ್ ಒಡೆತನದ ಅಥವಾ ಅಲ್ಲಿನ ಧ್ವಜ ಹೊಂದಿದ್ದ ಹಡಗುಗಳ ಮೇಲೆ ಕಳೆದ 42 ದಿನಗಳಲ್ಲಿ ಉತ್ತರ ಮತ್ತು ಮಧ್ಯ ಅರಬ್ಬಿ ಸಮುದ್ರ ಹಾಗೂ ಕೆಂಪು ಸಮುದ್ರದಲ್ಲಿ 35 ಬಾರಿ ಡ್ರೋನ್ ದಾಳಿ ನಡೆದಿದೆ ಎಂದು ವಿವರಿಸಿದ್ದಾರೆ.
'ನೆರೆಯ ರಾಷ್ಟ್ರಗಳು ನಮಗಿಂತ ಹೆಚ್ಚಿನ ಸಂಖ್ಯೆಯ ಯುಎವಿಗಳನ್ನು ಹೊಂದಿವೆ. ಈ ಕಾರಣಕ್ಕೆ ನಾವೂ ಕೂಡ ಇವುಗಳ ಬಳಕೆಗೆ ಆದ್ಯತೆ ನೀಡುವ ಅಗತ್ಯವಿದೆ' ಎಂದು ಹೇಳಿದರು.
ಕಳೆದ ಎರಡು ದಶಕಗಳಿಂದ ನೌಕಾಪಡೆಯು ಯುಎವಿಗಳನ್ನು ಬಳಸುತ್ತಿದೆ. 'ದೃಷ್ಟಿ 10 ಸ್ಟಾರ್‌ಲೈನರ್' ಯುಎವಿಯು ನೌಕಾಪಡೆಯ 'ಆತ್ಮನಿರ್ಭರ' ದೂರದೃಷ್ಟಿಯ ಸಂಕೇತವಾಗಿದೆ ಎಂದಿದ್ದಾರೆ.
ಈ ಯುಎವಿಯು ಅತ್ಯಾಧುನಿಕ ಸಂವೇದಕ ಮತ್ತು ಸುಧಾರಿತ ಸಂವಹನ ಸಾಮರ್ಥ್ಯವನ್ನು ಹೊಂದಿದೆ. ಭಾರತದ ಸಮುದ್ರ ಪ್ರದೇಶದಲ್ಲಿ ಕಣ್ಗಾವಲಿಗೆ ಮತ್ತು ನೌಕಾಪಡೆಯ ಕ್ಷಿಪ್ರ ಕಾರ್ಯಾಚರಣೆಗಳಿಗೆ ಇದು ಸಹಕಾರಿಯಾಗಲಿದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
2008ರಿಂದಲೂ ನೌಕಾಪಡೆಯು ಕಡಲ್ಗಳ್ಳರ ವಿರುದ್ಧ ಕಾರ್ಯಾಚರಣೆ ನಡೆಸಿದೆ. ಭವಿಷ್ಯದಲ್ಲಿ ನೌಕಾಪಡೆಯ ಕಾರ್ಯಾಚರಣೆಗಳಲ್ಲಿ ಯುಎವಿಗಳು ಪ್ರಮುಖ ಪಾತ್ರ ವಹಿಸಲಿವೆ ಎಂದೂ ಅವರು ತಿಳಿಸಿದ್ದಾರೆ.
ಹಡಗುಗಳ ಮೇಲೆ ಡ್ರೋನ್ ದಾಳಿ ನಡೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ದಾಳಿಗೆ ಒಳಗಾದ ಮೂರು ಹಡಗುಗಳಿಂದ ಸಂಗ್ರಹಿಸಿರುವ ಅವಶೇಷಗಳನ್ನು ವಿಧಿವಿಜ್ಞಾನ ವಿಶ್ಲೇಷಣೆಗೆ ಒಳಪಡಿಸಲಾಗುತ್ತಿದೆ ಎಂದಿದ್ದಾರೆ.
'ದೃಷ್ಟಿ 10 ಸ್ಟಾರ್‌ಲೈನರ್' ಅನ್ನು ಅದಾನಿ ಡಿಫೆನ್ಸ್ ಆಯಂಡ್ ಏರೋಸ್ಪೇಸ್ ನಿರ್ಮಿಸಿದೆ. ರಕ್ಷಣಾ ಖಾತೆಯ ರಾಜ್ಯ ಸಚಿವ ಅಜಯ್ ಭಟ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.