ನವದೆಹಲಿ :ಆರ್ಥಿಕ ದಿಗ್ಬಂಧನಕ್ಕೆ ಒಳಗಾಗಿರುವ ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದ್ದ ಕಚ್ಚಾ ತೈಲದ ಪ್ರಮಾಣವನ್ನು ಭಾರತೀಯ ರಿಫೈನರಿಗಳು ಗಣನೀಯವಾಗಿ ಕಡಿತಗೊಳಿಸಿದ್ದು, ಮತ್ತಷ್ಟು ಕಡಿತಗೊಳಿಸುವ ಸೂಚನೆ ನೀಡಿವೆ.
ರಷ್ಯಾದಿಂದ ಆಮದು ಮಾಡಿಕೊಳ್ಳುವ ಪ್ರತಿ ಬ್ಯಾರಲ್ ಕಚ್ಚಾ ತೈಲದ ಮೇಲೆ ನೀಡುತ್ತಿದ್ದ ರಿಯಾಯಿತಿಯನ್ನು ಇತ್ತೀಚಿನ ತಿಂಗಳುಗಳಲ್ಲಿ 10 ಡಾಲರ್ ಗಳಿಂದ 2 ಡಾಲರ್ ಗೆ ಇಳಿಸಿದ ಹಿನ್ನೆಲೆಯಲ್ಲಿ ತೈಲ ಆಮದು ಪ್ರಮಾಣವನ್ನು ಕಡಿತಗೊಳಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇದರ ಜತೆಗೆ ಅಧಿಕ ವಿಮೆ ಮತ್ತು ರಾಜಕೀಯ- ಭೌಗೋಳಿಕ ಕಾರಣದಿಂದಾಗಿ ಸಾಗಾಟ ವೆಚ್ಚಗಳು ಅಧಿಕ ಇರುವುದರಿಂದ ರಷ್ಯಾದ ತೈಲ ಆಮದು ಕಾರ್ಯಸಾಧು ಎನಿಸುತ್ತಿಲ್ಲ. ನಮ್ಮ ಸಾಂಪ್ರದಾಯಿಕ ಮೂಲಗಳಾದ ಸೌದಿ ಅರೇಬಿಯಾ ಮತ್ತು ಯುಎಇ ಅತ್ಯಂತ ಸ್ಪರ್ಧಾತ್ಮಕ ದರದಲ್ಲಿ ತೈಲ ಒದಗಿಸುತ್ತಿವೆ" ಎಂದು ಹಿರಿಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
2023ರ ಡಿಸೆಂಬರ್ ನಿಂದೀಚೆಗೆ ರಷ್ಯಾದಿಂದ ಬರುತ್ತಿದ್ದ ಹಲವು ಟ್ಯಾಂಕರ್ ಗಳನ್ನು ಭಾರತದಿಂದ ಬೇರೆಡೆಗೆ ಕಳುಹಿಸಲಾಗಿದೆ ಎಂಬ ವರದಿಗಳ ಬೆನ್ನಲ್ಲೇ ಈ ವಿಚಾರ ಬಹಿರಂಗವಾಗಿದೆ. ರಷ್ಯಾದ ಕಚ್ಚಾತೈಲ ಉತ್ಪಾದಕ ಕಂಪನಿಗಳು ದೊಡ್ಡ ಪ್ರಮಾಣದ ರಿಯಾಯಿತಿಯನ್ನು ಘೋಷಿಸಿದ ಹಿನ್ನೆಲೆಯಲ್ಲಿ ಭಾರತೀಯ ರಿಫೈನರಿಗಳು ರಷ್ಯಾದಿಂದ ದೊಡ್ಡ ಪ್ರಮಾಣದ ಕಚ್ಚಾತೈಲ ಆಮದು ಮಾಡಿಕೊಳ್ಳಲು ಆರಂಭಿಸಿದ್ದವು. ದೇಶದ ಒಟ್ಟು ಬೇಡಿಕೆಯ ಮೂರನೇ ಒಂದರಷ್ಟು ಭಾಗವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. 2022ರ ಆರಂಭದಲ್ಲಿ ಈ ಪ್ರಮಾಣ 0.22 ಶೇಕಡ ಇತ್ತು. ರಷ್ಯಾದಿಂದ ಕಡಿಮೆ ತೈಲ ಆಮದು ಮಾಡಿಕೊಳ್ಳಬೇಕು ಎಂಬ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡಗಳು ಬಂದಿದ್ದರೂ, ತಮ್ಮ ವಾಣಿಜ್ಯ ನಿರ್ಧಾರಗಳನ್ನು ಸ್ವತಂತ್ರವಾಗಿ ಕೈಗೊಳ್ಳಲು ಭಾರತೀಯ ತೈಲ ಶುದ್ಧೀಕರಣ ಘಟಕಗಳಿಗೆ ಅನುಮತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.