ಮುಳ್ಳೇರಿಯ: ಕೇವಲ 30 ಸೆಂಟ್ಸ್ ಜಾಗದಲ್ಲಿ ದೇಶದಲ್ಲೇ ನಾಶಗೊಂಡಿರುವ ಅತ್ಯಪೂರ್ವ 650ರಷ್ಟು ಭತ್ತದ ತಳಿಗಳನ್ನು ಬೆಳೆಸಿ, ಉಳಿಸಿದ ಅಪೂರ್ವ ತಳಿಸಂರಕ್ಷಕ "ಪದ್ಮಶ್ರೀ" ಗೌರವಕ್ಕೆ ಪಾತ್ರರಾದ ಬೆಳ್ಳೂರಿನ ಬೆಳೇರಿ ಸತ್ಯನಾರಾಯಣರನ್ನು ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ವತಿಯಿಂದ ಮನೆಗೆ ತೆರಳಿ ಅಭಿನಂದಿಸಲಾಯಿತು.
ಕರ್ನಾಟಕದಲ್ಲಿ ಅಳಿದು ಹೋದ ಅತ್ಯಪೂರ್ವ ಭತ್ತದ ತಳಿಗಳನ್ನು ಗಡಿನಾಡಿನ ಕನ್ನಡಿಗರೊಬ್ಬರು ಪ್ರಾಮಾಣಿಕ ಕಾಳಜಿಯಿಂದ ಸಂರಕ್ಷಿಸಿದ ಅಪೂರ್ವ ಸಾಧನೆ ಇವರದ್ದು. ವಿಶಾಲ ಗದ್ದೆಗಳಿಲ್ಲವೆಂದು ಕೊರಗದೇ ಇರುವ ಅಂಗೈಯಗಲದ ಜಾಗದಲ್ಲಿ ಪ್ಲಾಸ್ಟಿಕ್ ಕೈಚೀಲ ಬಳಸಿ ತಳಿ ಬೆಳೆಸಿ ಕಾಪಾಡಿ, ಅಪೇಕ್ಷಿತ ಆಸಕ್ತರಿಗೆ ಉಚಿತವಾಗಿಯೇ ನೀಡುವ ಇವರು ಈಗಾಗಲೇ ಕೇಂದ್ರ ಕೃಷಿ ಇಲಾಖೆಯಿಂದ "ತಳಿ ಸಂರಕ್ಷಕ" ನೆಂಬ ಪ್ರಶಸ್ತಿ ಪಡೆದಿದ್ದಾರೆ. ಇದೀಗ ಅವರಿಗೆ ಪದ್ಮಶ್ರೀ ದೊರೆಯುವ ಮೂಲಕ ಕಾಸರಗೋಡಿನ ಕನ್ನಡಿಗನೊಬ್ಬನ ಈ ಸಾಧನೆ ಇಡೀ ಜಿಲ್ಲೆಗೆ, ಕನ್ನಡಿಗರಿಗೆ ಅಭಿಮಾನ ಮೂಡಿಸಿದೆ.
ಕನ್ನಡ ಸಾಹಿತ್ಯ ಪರಿಷತ್ ಗಡಿನಾಡ ಘಟಕ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಪದಾಧಿಕಾರಿಗಳಾದ ನ್ಯಾಯವಾದಿ ಥೋಮಸ್ ಡಿ ಸೋಜ ಸೀತಾಂಗೋಳಿ, ರಾಮಚಂದ್ರ ಭಟ್ ಧರ್ಮತ್ತಡ್ಕ, ಪತ್ರಕರ್ತ, ಲೇಖಕ ಎಂ.ನಾ. ಚಂಬಲ್ತಿಮಾರ್, ಉಪನ್ಯಾಸಕ ರತ್ನಾಕರ ಮಲ್ಲಮೂಲೆ, ಅಖಿಲೇಶ್ ನಗುಮೊಗಂ, ಯುವ ಸಾಹಿತಿ,ಕವಿ ದಯಾನಂದ ರೈ ಕಲ್ವಾಜೆ ಮೊದಲಾದವರು ಮನೆಗೆ ತೆರಳಿದ ನಿಯೋಗದಲ್ಲಿ ಉಪಸ್ಥಿತರಿದ್ದರು.
ಜ.30ರಂದು ಸಂಜೆ ಕಾಸರಗೋಡಿನಲ್ಲಿ ನಡೆಯುವ ಕ.ಸಾ.ಪದ "ಕನ್ನಡ ಮೈತ್ರಿ" ಕಾರ್ಯಕ್ರಮದಲ್ಲಿ ಬೆಳೇರಿ ಸತ್ಯನಾರಾಯಣರನ್ನು ಸನ್ಮಾನಿಸಿ ಅಭಿನಂದಿಸಲಿದ್ದು, ಅದಕ್ಕಾಗಿ ಅವರನ್ನು ಆಹ್ವಾನಿಸಲಾಯಿತು.