ತಿರುವನಂತಪುರಂ: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಎಚ್‍ಐವಿ ಮತ್ತು ಏಡ್ಸ್ (ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆಯಡಿ ಎಚ್‍ಐವಿ ಸೋಂಕಿತ ವ್ಯಕ್ತಿಯ ಮಾಹಿತಿ ಹರಡಿದ ಪ್ರಕರಣ ದಾಖಲಾಗಿದೆ.
ತಿರುವನಂತಪುರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (ಡಿಎಲ್‍ಎಸ್‍ಎ) ಕಾರ್ಯದರ್ಶಿ ಉಪ ನ್ಯಾಯಾಧೀಶ ಎಸ್. ಶಾಮನಾದ್ ಅವರ ಸೂಚನೆ ಮೇರೆಗೆ ಮ್ಯೂಸಿಯಂ ಪೋಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
2017ರಲ್ಲಿ ಕಾಯ್ದೆ ಜಾರಿಗೆ ಬಂದ ನಂತರ ರಾಜ್ಯದಲ್ಲಿ ಈ ಕುರಿತು ದಾಖಲಾದ ಮೊದಲ ಪ್ರಕರಣ ಇದಾಗಿದೆ ಎಂದು ಡಿಎಲ್‍ಎಸ್‍ಎ ಕಾರ್ಯದರ್ಶಿ ತಿಳಿಸಿದ್ದಾರೆ. ಕಾರ್ಯಕರ್ತೆ ಹಾಗೂ ಮಕ್ಕಳ ಹಕ್ಕು ಆಯೋಗದ ಮಾಜಿ ಸದಸ್ಯೆ ಜೆ.ಸಂಧ್ಯಾ ಅವರ ಸಹಾಯದಿಂದ ದೂರುದಾರರು ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಿದ್ದರು. ಎಚ್‍ಐವಿ ಪೀಡಿತರ ಮಾನವ ಹಕ್ಕುಗಳನ್ನು ಉಲ್ಲಂಘಿಸುವ ಎಲ್ಲಾ ಕೃತ್ಯಗಳು ಈ ಕಾಯ್ದೆಯಡಿ ಶಿಕ್ಷಾರ್ಹವಾಗಿವೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನಗೆ ಅವಮಾನ ಮಾಡಲು ದೂರುದಾರರು ಎಚ್‍ಐವಿ ಪಾಸಿಟಿವ್ ಎಂದು ತಮ್ಮ ಸಂಬಂಧಿಕರು ಮತ್ತು ಸ್ನೇಹಿತರಿಗೆ ಬಹಿರಂಗಪಡಿಸಿದ್ದಾಗಿ ದೂರಲಾಗಿದೆ. ಎಚ್‍ಐವಿ ಮತ್ತು ಏಡ್ಸ್ ಕಾಯ್ದೆಯ ಸೆಕ್ಷನ್ 4 ಮತ್ತು 37 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿ ದಂಡ ವಿಧಿಸಬಹುದಾದ ಸೆಕ್ಷನ್ ಇದಾಗಿದೆ.