ಅಯೋಧ್ಯೆ: ಅಯೋಧ್ಯೆಯ ಕುಬೇರ ಟೀಲಾದಲ್ಲಿ ಸ್ಥಾಪಿಸಲಾಗಿರುವ ಜಟಾಯು ಪಕ್ಷಿಯ 3.5 ಟನ್ ತೂಕದ ಪ್ರತಿಮೆಯನ್ನು ರೂಪಿಸಲು ಶಿಲ್ಪಿ ರಾಮ ಸುತಾರ ಅವರಿಗೆ ಮೂರು ತಿಂಗಳು ಬೇಕಾಯಿತು. ರಾಮ ಸುತಾರ ಅವರು ಎರಡು ತಿಂಗಳನ್ನು ಜಟಾಯುವಿನ ಬಗ್ಗೆ ಅಧ್ಯಯನ ನಡೆಸುವುದಕ್ಕಾಗಿಯೇ ವ್ಯಯಿಸಿದ್ದರು.

ಜಟಾಯು ಪಕ್ಷಿಯ ಪ್ರತಿಮೆಯನ್ನು ರಾಮ ಮಂದಿರ ಸಂಕೀರ್ಣದ ಆವರಣದಲ್ಲಿ ಎಂಟು ಅಡಿ ಎತ್ತರದ ದಿಬ್ಬವೊಂದರ ಮೇಲೆ ಇರಿಸಲಾಗಿದೆ. 'ಪಕ್ಷಿಯ ಪ್ರತಿಮೆಯು ಒಟ್ಟು 20 ಅಡಿ ಎತ್ತರ ಇದೆ. ಇದರ ಅಗಲ ಮತ್ತು ಉದ್ದ ತಲಾ 8 ಅಡಿಗಳಷ್ಟಿದೆ. ಇದು ಈಗ ಅಯೋಧ್ಯೆಯಲ್ಲಿ ನೆಲೆಯಾಗಿರುವುದು ಸಂತಸದ ವಿಚಾರ' ಎಂದು ರಾಮ ಸುತಾರ ಅವರ ಮಗ ಅನಿಲ್ ರಾಮ ಸುತಾರ ತಿಳಿಸಿದರು.
ಅನಿಲ್ ಮತ್ತು ರಾಮ ಅವರು ಬಾಲರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಟಾಯು ಪಕ್ಷಿಯ ಪಾತ್ರವನ್ನು ರಾಮಾಯಣ ಬಲ್ಲವರು ಮರೆಯಲು ಸಾಧ್ಯವಿಲ್ಲ. ರಾವಣನಿಂದ ಸೀತೆಯನ್ನು ರಕ್ಷಿಸಲು ಜಟಾಯು ಪ್ರಯತ್ನಿಸುತ್ತದೆ. ಆದರೆ ರಾವಣ ಜಟಾಯುವನ್ನು ಕೊಲ್ಲುತ್ತಾನೆ.
ಸುತಾರ ಅವರು ಈ ಪಕ್ಷಿಯ ಪ್ರತಿಮೆಯನ್ನು ನೊಯ್ಡಾದಲ್ಲಿ ಇರುವ ತಮ್ಮ ಸ್ಟುಡಿಯೊದಲ್ಲಿ ರೂಪಿಸಿದ್ದಾರೆ. ಅಲ್ಲಿಂದ ಒಂದು ಟ್ರಕ್ ಮೂಲಕ ಅದನ್ನು ಅಯೋಧ್ಯೆಗೆ ತರಲಾಗಿದೆ. ಮಿಶ್ರಲೋಹದಿಂದ ಈ ಪ್ರತಿಮೆಯನ್ನು ಸಿದ್ಧಪಡಿಸಲಾಗಿದೆ.
ಅಯೋಧ್ಯೆಗೆ ರವಾನಿಸುವ ಮೊದಲು ಜಟಾಯು ಪ್ರತಿಮೆಯ ಬೇರೆ ಬೇರೆ ಭಾಗಗಳನ್ನು ಜೋಡಿಸಿ, ಬೆಸುಗೆ ಹಾಕಲಾಯಿತು ಎಂದು ಅನಿಲ್ ತಿಳಿಸಿದರು. ಪ್ರಾಣಪ್ರತಿಷ್ಠಾಪನೆ ಕಾರ್ಯದಲ್ಲಿ ಪಾಲ್ಗೊಂಡ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಕುಬೇರ ಟೀಲಾಕ್ಕೆ ಭೇಟಿ ನೀಡಿ, ಶಿವನಿಗೆ ಅಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಜಟಾಯುವಿನ ಕರ್ತವ್ಯ ಪ್ರಜ್ಞೆಯು ಸಮರ್ಥ ಹಾಗೂ ದಿವ್ಯ ಭಾರತಕ್ಕೆ ಅಡಿಗಲ್ಲು ಇದ್ದಂತೆ ಎಂದು ಹೇಳಿದ್ದರು.