ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪುಟದ ಎಲ್ಲಾ ಸಹೋದ್ಯೋಗಿಗಳಿಗೆ ಸದ್ಯಕ್ಕೆ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಬೇಡಿ ಎಂದು ಬುಧವಾರ ಸಲಹೆ ನೀಡಿದ್ದಾರೆ.
ಬುಧವಾರ ತಮ್ಮ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಿ ಮೋದಿ ಈ ಸಲಹೆ ನೀಡಿದ್ದು, ಈಗ ವಿಪರೀತ ಜನದಟ್ಟಣೆ ಇದೆ. ಈ ಸಂದರ್ಭದಲ್ಲಿ ಪ್ರೋಟೋಕಾಲ್‌ಗಳೊಂದಿಗೆ ವಿಐಪಿಗಳು ರಾಮ ಮಂದಿರಕ್ಕೆ ಭೇಟಿ ನೀಡುವುದರಿಂದ ಸಾರ್ವಜನಿಕರಿಗೆ ಉಂಟಾಗುವ ಅನಾನುಕೂಲತೆಯನ್ನು ತಪ್ಪಿಸಲು ಕೇಂದ್ರ ಸಚಿವರು ಮಾರ್ಚ್‌ನಲ್ಲಿ ಅಯೋಧ್ಯೆಗೆ ಭೇಟಿ ನೀಡುವ ಬಗ್ಗೆ ಯೋಚಿಸಬೇಕು ಎಂದು ಹೇಳಿದ್ದಾರೆ.
ಅಯೋಧ್ಯೆ ರಾಮ ಮಂದಿರವನ್ನು ಸಾರ್ವಜನಿಕ ದರ್ಶನಕ್ಕೆ ಮುಕ್ತಗೊಳಿಸಿದ ನಂತರ ಮೊದಲ ದಿನವೇ ಐದು ಲಕ್ಷಕ್ಕೂ ಹೆಚ್ಚು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಎರಡನೇ ದಿನವಾದ ಬುಧವಾರ ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದ್ದಾರೆ.