ನವದೆಹಲಿ: ದಟ್ಟ ಮಂಜಿನಿಂದಾಗಿ ಹಲವು ವಿಮಾನಗಳು ಭಾರಿ ವಿಳಂಭವಾಗುತ್ತಿದ್ದು, ನಾಗರಿಕ ವಿಮಾನಯಾನ ಸಚಿವಾಲಯವು ದೆಹಲಿ, ಮುಂಬೈ ಮತ್ತು ಇತರ ನಾಲ್ಕು ಮೆಟ್ರೋ ವಿಮಾನ ನಿಲ್ದಾಣಗಳಲ್ಲಿ ಇಂತಹ ಘಟನೆಗಳ ಬಗ್ಗೆ ದಿನಕ್ಕೆ ಮೂರು ಬಾರಿ ವರದಿ ಮಾಡುವಂತೆ ಸೂಚಿಸಿದೆ ಮತ್ತು ಪ್ರಯಾಣಿಕರ ಸಮಸ್ಯೆಗಳನ್ನು ಪರಿಹರಿಸಲು ವಿಮಾನ ನಿಲ್ದಾಣಗಳಲ್ಲಿ 'ವಾರ್ ರೂಮ್' ಸ್ಥಾಪಿಸುವುದಾಗಿ ತಿಳಿಸಿದೆ.
ವಿಮಾನ ನಿಲ್ದಾಣಗಳಲ್ಲಿ ಸಾಕಷ್ಟು ಸಿಐಎಸ್‌ಎಫ್ ಸಿಬ್ಬಂದಿ ಲಭ್ಯತೆ ಇರುವುದನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಮಂಗಳವಾರ ಹೇಳಿದ್ದಾರೆ.
ಕಳೆದ ಕೆಲವು ದಿನಗಳಲ್ಲಿ, ಮಂಜಿನಿಂದಾಗಿ ನೂರಾರು ವಿಮಾನಗಳ ವಿಳಂಬ ಅಥವಾ ರದ್ದತಿಗೆ ಕಾರಣವಾಗಿದ್ದು, ಇದು ದೇಶೀಯ ಮತ್ತು ಅಂತರಾಷ್ಟ್ರೀಯ ವಾಣಿಜ್ಯ ವಿಮಾನ ಕಾರ್ಯಾಚರಣೆಗಳಿಗೆ ಅಡೆತಡೆ ಉಂಟು ಮಾಡಿದೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಿಂಧಿಯಾ, ಪ್ರಯಾಣಿಕರ ಅನಾನುಕೂಲತೆಯನ್ನು ಕಡಿಮೆ ಮಾಡಲು ಏರ್‌ಲೈನ್‌ಗಳಿಗೆ ಹೊಸ ಎಸ್ ಒಪಿ ಅಥವಾ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಎಲ್ಲಾ ಆರು ಮೆಟ್ರೋ ವಿಮಾನ ನಿಲ್ದಾಣಗಳಿಂದ ದೈನಂದಿನ ವರದಿಗಳನ್ನು ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ನಿರ್ದೇಶನಗಳ ಅನುಷ್ಠಾನದ ವರದಿಗಳನ್ನು ಪಡೆಯುತ್ತದೆ. ಪ್ರಯಾಣಿಕರ ಅನಾನುಕೂಲತೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಲು ವಿಮಾನ ನಿಲ್ದಾಣಗಳು ಮತ್ತು ಏರ್‌ಲೈನ್ ನಿರ್ವಾಹಕರು ಎಲ್ಲಾ ಆರು ಮೆಟ್ರೋ ವಿಮಾನ ನಿಲ್ದಾಣಗಳಲ್ಲಿ ‘ವಾರ್ ರೂಮ್’ಗಳನ್ನು ಸ್ಥಾಪಿಸುತ್ತಾರೆ ಎಂದು ಸಚಿವರು ಹೇಳಿದ್ದಾರೆ.