ತಿರುಚಿರಾಪಳ್ಳಿ : ತಮಿಳುನಾಡಿನ ತಿರುಚಿರಾಪಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಇಂದು (ಮಂಗಳವಾರ) ಉದ್ಘಾಟನೆ ಮಾಡಿದ್ದಾರೆ.
ಹೊಸ ಟರ್ಮಿನಲ್ ಕಟ್ಟಡವನ್ನು ₹1,100 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಅಂತರರಾಷ್ಟ್ರೀಯ ಪ್ರಯಾಣಿಕರ ದಟ್ಟಣೆಯಲ್ಲಿ ತಮಿಳುನಾಡಿನ ಚೆನ್ನೈ ವಿಮಾನ ನಿಲ್ದಾಣದ ನಂತರ ತಿರುಚಿರಾಪಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಎರಡನೇ ಅತಿ ದೊಡ್ಡ ವಿಮಾನ ನಿಲ್ದಾಣವಾಗಿದೆ.
ಹೊಸ ಟರ್ಮಿನಲ್ ಕಟ್ಟಡವು 60 ಚೆಕ್-ಇನ್ ಕೌಂಟರ್‌ಗಳು, 5 ಬ್ಯಾಗೇಜ್ ಬರುವ ಸ್ಥಳಗಳು, 60 ಆಗಮನ ಇಮಿಗ್ರೇಷನ್ ಕೌಂಟರ್‌ಗಳು ಮತ್ತು 44 ನಿರ್ಗಮನ ಇಮಿಗ್ರೇಷನ್ ಕೌಂಟರ್‌ಗಳನ್ನು ಒಳಗೊಂಡಿದೆ.
'ಹೊಸ ಟರ್ಮಿನಲ್‌ನಲ್ಲಿ ನಾವು ಸಾಕಷ್ಟು ಕಲಾಕೃತಿ ಮತ್ತು ಭಿತ್ತಿಚಿತ್ರಗಳನ್ನು ಬಿಡಿಸಿದ್ದೇವೆ. ಇದಕ್ಕಾಗಿ 100 ಕಲಾವಿದರು 30 ದಿನಗಳ ಕಾಲ ಕೆಲಸ ಮಾಡಿದ್ದಾರೆ' ಎಂದು ಕಲಾ ನಿರ್ದೇಶಕ ರಾಜವಿಘ್ನೇಶ್ ಅವರು ಸುದ್ದಿಸಂಸ್ಥೆ 'ಎಎನ್‌ಐ'ಗೆ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮತ್ತು ನಾಳೆ ಎರಡು ದಿನಗಳ ಕಾಲ ತಮಿಳುನಾಡು, ಲಕ್ಷದ್ವೀಪ ಮತ್ತು ಕೇರಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ತಿಳಿಸಿದೆ.
ಪಂಚರಾಜ್ಯಗಳಿಗೆ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ದಕ್ಷಿಣ ಭಾರತಕ್ಕೆ ಪ್ರಧಾನಿ ಮೋದಿ ಅವರ ಮೊದಲ ಭೇಟಿ ಇದಾಗಿದೆ.