ಪೆದಮೀರಂ : ಸಂಕ್ರಾಂತಿ ಪ್ರಯುಕ್ತ ಆಂಧ್ರಪ್ರದೇಶದ ಉಭಯ ಗೋದಾವರಿ ಜಿಲ್ಲೆ ಸೇರಿದಂತೆ ವಿವಿಧೆಡೆ ನಡೆದ ವಾರ್ಷಿಕ ಕೋಳಿ ಕಾಳಗದಲ್ಲಿ ಭಾಗವಹಿಸಲು (ಪಂಟರ್) ಮತ್ತು ನೋಡಲು ಭಾರಿ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು.
ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮವರಂ ಸನಿಹದ ಪೆದಮೀರಂ ಹಳ್ಳಿಯಲ್ಲಿ ಹೊರರಾಜ್ಯಗಳಿಂದ ಬಂದಿದ್ದ ಕಾರುಗಳು ಸಾಲುಗಟ್ಟಿದ್ದವು.
ಅವರೆಲ್ಲ ಕೋಳಿ ಕಾಳಗ ನೋಡಲು ಬಂದವರು. ಅಲ್ಲಿ ನೆರೆದವರಲ್ಲಿ ಹಬ್ಬಕ್ಕೆಂದು ವಿದೇಶದಿಂದ ಹಾರಿಬಂದಿದ್ದವರೂ ಇದ್ದರು. ಈ ಸಮಯದಲ್ಲಿ ಕೋಟ್ಯಂತರ ರೂಪಾಯಿಯ ವ್ಯವಹಾರ ನಡೆಯುತ್ತದೆ.
ಸಾವಿರಕ್ಕೂ ಹೆಚ್ಚು ಮಂದಿಗೆ ಆಸನದ ವ್ಯವಸ್ಥೆ ಮಾಡಲಾಗಿತ್ತು. ಜೂಜುಕೋರರ ನೆರವಿಗೆ ಕಾರ್ಡ್ ಸ್ವೈಪಿಂಗ್ ಯಂತ್ರ, ಹಣ ಎಣಿಸುವ ಯಂತ್ರಗಳನ್ನೂ ತರಲಾಗಿತ್ತು. ಉಪಹಾರವೂ ಸೇರಿದಂತೆ ಮಾಂಸಾಹಾರದ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ಅಲ್ಲಿ ಕೋಳಿ ಕಾಳಗದ ಜೊತೆಗೆ ಇಸ್ಪೀಟ್ ಮತ್ತಿತರ ಜೂಜುಗಳನ್ನೂ ಆಡಲಾಗುತ್ತಿತ್ತು. ಅಲ್ಲಿಗೆ ಅರ್ಧ ಕಿಲೋಮೀಟರ್ ದೂರದ ಜುವ್ವಲಪಾಲೇಂ ಎಂಬಲ್ಲಿಯೂ ಸಣ್ಣದೊಂದು ಕೋಳಿ ಕಾಳಗ ಮತ್ತಿತರ ಜೂಜಾಟ ನಡೆಯುತ್ತಿತ್ತು. ಜೂಜುಕೋರರು ಮತ್ತು ಪ್ರೇಕ್ಷಕರ ಪೈಕಿ ಹೆಚ್ಚಿನವರು ಗಂಡಸರೇ ಆಗಿದ್ದರೂ ಕೆಲವು ಮಹಿಳೆಯರು, ಮಕ್ಕಳೂ ಕೂಡ ಸಂಕ್ರಾಂತಿ ಹಬ್ಬದ ವಿಶೇಷ ಕೋಳಿ ಕಾಳಗ ನೋಡಲು ಬಂದಿದ್ದರು.
ಕೋಳಿ ಕಾಳಗ, ಜೂಜಾಟಗಳು ಉಭಯ ಗೋದಾವರಿ ಜಿಲ್ಲೆಗಳಲ್ಲಿ ಅಷ್ಟೇ ಅಲ್ಲ, ಆಂಧ್ರದ ಕೃಷ್ಣಾ, ಎನ್‌ಟಿಆರ್ ಮತ್ತಿತರ ಜಿಲ್ಲೆಗಳಲ್ಲಿಯೂ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಮೂರು ದಿನಗಳವರೆಗೆ ನಡೆಯುತ್ತವೆ.