ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳ ಕುರಿತಾದ ಪ್ರತಿಪಕ್ಷಗಳ ಇಂಡಿಯಾ ಬಣದ ನೈಜ ಪ್ರಶ್ನೆಗಳಿಗೆ ವಸ್ತುನಿಷ್ಠ ಉತ್ತರ ನೀಡುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.
ನಮ್ಮೆಲ್ಲ ಪ್ರಶ್ನೆಗಳಿಗೆ ಪದೇ ಪದೇ ಸಾಮಾನ್ಯ FAQ ಅನ್ನೇ ಉತ್ತರವಾಗಿ ಆಯೋಗ ನೀಡುತ್ತಿದೆ ಎಂದು ಅವರು ಟೀಕಿಸಿದ್ಧಾರೆ.
ವಿವಿಪ್ಯಾಟ್ ಕುರಿತಾದ ಕಳವಳದ ಬಗ್ಗೆ ತಾವು ಬರೆದಿದ್ದ ಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿದ ಕುರಿತಂತೆ ರಮೇಶ್, ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಮತ್ತೆ ಪತ್ರ ಬರೆದಿದ್ದಾರೆ.
'ಗೌರವಾನ್ವಿತ ಚುನಾವಣಾ ಆಯೋಗಕ್ಕೆ ಇಂಡಿಯಾ ಬಣದ ನಾಯಕರ ಭೇಟಿಗೆ ಸಮಯ ನಿಗದಿಗೆ ಕೋರಿ ನಾನು ಮನವಿ ಸಲ್ಲಿಸಿದ್ದೆ. ಮುಂಬರುವ ಚುನಾವಣೆಯಲ್ಲಿ ವಿವಿಪ್ಯಾಟ್ ಬಳಕೆ ಮತ್ತು ಆ ಕುರಿತ ಸಲಹೆ ಬಗ್ಗೆ ಚರ್ಚಿಸುವುದು ನಮ್ಮ ಭೇಟಿಯ ಅಜೆಂಡಾವಾಗಿದೆ ಎಂದು ತಿಳಿಸಲಾಗಿತ್ತು' ಎಂದು ಜನವರಿ 7ರ ಪತ್ರದಲ್ಲಿ ರಮೇಶ್ ಹೇಳಿದ್ದಾರೆ.
'ಭೇಟಿಗೆ ಸಮಯ ಕೋರಿದ್ದ ನಮ್ಮ ಮನವಿಯನ್ನು ಚುನಾವಣಾ ಆಯೋಗವು ಸಂಪೂರ್ಣವಾಗಿ ತಳ್ಳಿಹಾಕಿದೆ. ಇವಿಎಂ ಕುರಿತಾದ ನಮ್ಮ ನೈಜ ಕಳವಳಕ್ಕೆ ವಸ್ತುನಿಷ್ಠ ಉತ್ತರ ಕೊಡುವಲ್ಲಿ ಆಯೋಗ ಮತ್ತೊಮ್ಮೆ ವಿಫಲವಾಗಿದೆ. ಇವಿಎಂಗಳು ಮತ್ತು ವಿವಿಪ್ಯಾಟ್‌ಗಳಿಗೆ ಸಂಬಂಧಿಸಿದಂತೆ ಎಲ್ಲಾ ಪ್ರಶ್ನೆಗಳಿಗೆ ಉತ್ತರದ ಪುಸ್ತಕವಾಗಿ ಚುನಾವಣಾ ಆಯೋಗದ ಹಳೆಯ FAQಗಳಿಗೆ ಆಯೋಗವು ನಮಗೆ ಪದೇ ಪದೇ ನಿರ್ದೇಶಿಸುತ್ತಿದೆ' ಎಂದು ರಮೇಶ್ ತಿಳಿಸಿದ್ದಾರೆ.
ನಮ್ಮ ಕಳವಳಕ್ಕೆ FAQನಲ್ಲಿ ಉತ್ತರ ಸಿಕ್ಕಿಲ್ಲ ಎಂದು ಆಯೋಗದ ಗಮನ ಸೆಳೆದಾಗ ಆ ಬಗ್ಗೆ ವಿವರಣೆ ನೀಡುವ ಬದಲು ನಾವು ಎತ್ತಿರುವ ಪ್ರಶ್ನೆಗಳೇ ತಪ್ಪು ಅಥವಾ ಸೂಕ್ತವಾಗಿಲ್ಲ ಎಂದು ತಿಳಿಸಲಾಗಿದೆ ಎಂದು ಅವರು ದೂರಿದ್ದಾರೆ.
'ಈ ಬಗೆಹರಿಯದ ಮತ್ತು ನ್ಯಾಯಸಮ್ಮತವಾದ ಪ್ರಶ್ನೆಗಳ ಕುರಿತಾಗಿ ಚರ್ಚಿಸಲು ನಾವು ಆಯೋಗವನ್ನು ಏಕೆ ಕೇಳುತ್ತಿದ್ದೇವೆ ಎಂಬುದನ್ನು ನಿಖರವಾಗಿ ವಿವರಿಸಲಾಗಿದೆ. ಇವಿಎಂಗಳು ಅಥವಾ ವಿವಿಪ್ಯಾಟ್‌ಗಳ ಕುರಿತಾಗಿ ರಾಜಕೀಯ ಭಾಗವಹಿಸುವಿಕೆಯನ್ನು ನೀವು ನಿರಾಕರಿಸಿರುವುದು ಇಂಡಿಯಾ ಬಣಕ್ಕೆ ಮಾತ್ರವಲ್ಲ, ಎಲ್ಲಾ ರಾಜಕೀಯ ಪಕ್ಷಗಳಿಗೆ ಗಂಭೀರ ಕಳವಳದ ವಿಷಯವಾಗಿದೆ'ಎಂದು ರಮೇಶ್ ಹೇಳಿದ್ದಾರೆ.