HEALTH TIPS

ವಿಕೋಪಗಳ ಹಿಂದೆ ಶತ್ರುಗಳ ಕೈವಾಡ: ಪತ್ತೆಗೆ ಬೇಕು ವಿಸ್ತೃತ ಅಧ್ಯಯನ- ರಾಜನಾಥ್‌

               ಡೆಹರಾಡೂನ್‌ (PTI): ದೇಶದ ಗಡಿಯ ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನೈಸರ್ಗಿಕ ವಿಕೋಪಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಇದರ ಹಿಂದೆ ಭಾರತದ ವಿರೋಧಿಗಳು ಇದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ವಿಸ್ತೃತ ಅಧ್ಯಯನದ ಅಗತ್ಯವಿದೆ ಎಂದು ಶುಕ್ರವಾರ ಹೇಳಿದ್ದಾರೆ.

            ಜೋಶಿಮಠ ಸಮೀಪದ ಢಾಕ್ ಗ್ರಾಮದಲ್ಲಿ ವಿವಿಧ ರಾಜ್ಯಗಳಿಗೆ ₹ 670 ಕೋಟಿ ವೆಚ್ಚದಲ್ಲಿ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿಆರ್‌ಒ) ಕೈಗೊಂಡಿರುವ ಸೇತುವೆ ಮತ್ತು ಇತರ 34 ಗಡಿ ಪ್ರದೇಶದ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದ ನಂತರ ಅವರು ಸಭೆ ಉದ್ದೇಶಿಸಿ ಮಾತನಾಡಿದರು.

               'ಹವಾಮಾನ ಬದಲಾವಣೆಯು ಇನ್ನು ಮುಂದೆ ಕೇವಲ ಹವಾಮಾನ ಸಂಬಂಧಿತ ವಿದ್ಯಮಾನವಾಗಿ ನೋಡಲಾಗದು. ಇದು ರಾಷ್ಟ್ರೀಯ ಭದ್ರತೆಯ ಜತೆಗೆ ಸಂಬಂಧ ಹೊಂದಿದೆ' ಎಂದು ಹೇಳಿದರು.

            'ಉತ್ತರಾಖಂಡ, ಹಿಮಾಚಲ ಪ್ರದೇಶ, ಸಿಕ್ಕಿಂ ಮತ್ತು ಲಡಾಖ್‌ಗಳಲ್ಲಿ ಇತ್ತೀಚೆಗೆ ನೈಸರ್ಗಿಕ ವಿಕೋಪಗಳು ಹೆಚ್ಚಿವೆ. ತಜ್ಞರು ಇವು ಹವಾಮಾನ ಬದಲಾವಣೆ ಸಂಬಂಧಿತ ವಿಕೋಪಗಳು ಎಂದು ಭಾವಿಸಿದ್ದಾರೆ. ಆದರೆ, ಅದರಲ್ಲಿ ನಮ್ಮ ವಿರೋಧಿಗಳ ಕೈವಾಡ ಇದೆಯೇ ಎಂಬುದನ್ನು ಪತ್ತೆ ಮಾಡಲು ವಿಸ್ತೃತ ಅಧ್ಯಯನ ನಡೆಸಬೇಕಾಗಿದೆ ಎನ್ನುವುದು ನನ್ನ ಭಾವನೆ' ಎಂದು ಸಿಂಗ್, ಯಾವುದೇ ದೇಶವನ್ನು ಹೆಸರಿಸದೆ ಹೇಳಿದರು.

              'ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನೈಸರ್ಗಿಕ ವಿಕೋಪಗಳು ನಿರಂತರ ಹೆಚ್ಚುತ್ತಿರುವುದನ್ನು ರಕ್ಷಣಾ ಸಚಿವಾಲಯವು ಗಂಭೀರವಾಗಿ ಪರಿಗಣಿಸಿದೆ. ಇದು ವಿಸ್ತೃತ ಅಧ್ಯಯನಕ್ಕೆ ಅರ್ಹ ವಿಷಯವೆಂದು ನಾವು ಭಾವಿಸಿದ್ದೇವೆ. ಇದಕ್ಕಾಗಿ ಅಗತ್ಯವಿದ್ದರೆ ಸ್ನೇಹಪರ ದೇಶಗಳ ಸಹಾಯವನ್ನು ಸಹ ತೆಗೆದುಕೊಳ್ಳಲಾಗುವುದು' ಎಂದು ತಿಳಿಸಿದರು.

              'ಗಡಿ ಪ್ರದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಮೋದಿ ಸರ್ಕಾರದ ಧೋರಣೆ ಹಿಂದಿನ ಸರ್ಕಾರಗಳ ವಿಧಾನಕ್ಕಿಂತ ಭಿನ್ನವಾಗಿದೆ. ನಾವು ಗಡಿ ಪ್ರದೇಶಗಳನ್ನು ಬಫರ್ ವಲಯಗಳಾಗಿ ಪರಿಗಣಿಸುವುದಿಲ್ಲ. ನಮಗೆ ಅವು ನಮ್ಮ ಮುಖ್ಯವಾಹಿನಿಯ ಭಾಗವಾಗಿದೆ. ನಾವು ನಮ್ಮ ಅಭಿವೃದ್ಧಿ ಪಯಣ ಸಮುದ್ರದಿಂದ ಗಡಿಗಳವರೆಗೆ ಕೊಂಡೊಯ್ಯ ಬಯಸುತ್ತೇವೆ. ಅದಕ್ಕಾಗಿಯೇ ನಾವು ನಮ್ಮ ಗಡಿ ಪ್ರದೇಶಗಳಲ್ಲಿಯೂ ವಿಶ್ವ ದರ್ಜೆಯ ಮೂಲಸೌಕರ್ಯಗಳನ್ನು ರೂಪಿಸುತ್ತಿದ್ದೇವೆ' ಎಂದು ಅವರು ಹೇಳಿದರು.

              ಇತ್ತೀಚಿನ ವರ್ಷಗಳಲ್ಲಿ ಬಿಆರ್‌ಒ ಇದರಲ್ಲಿ ಅಸಾಧಾರಣ ಪಾತ್ರ ವಹಿಸಿದೆ. ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಕ್ಕಿಬಿದ್ದ ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಿಸುವಲ್ಲಿ, ದುರ್ಗಮ ಭೂಪ್ರದೇಶದ ಬೆಟ್ಟದ ಇಳಿಜಾರಿನಲ್ಲಿ 1.5 ಕಿ.ಮೀ. ಹಾದಿ ಸಿದ್ಧಪಡಿಸುವಲ್ಲಿ ಬಿಆರ್‌ಒ ಮಹಿಳಾ ಸಿಬ್ಬಂದಿ ವಹಿಸಿದ ಪಾತ್ರವನ್ನು ಸಿಂಗ್‌ ಶ್ಲಾಘಿಸಿದರು.

ಪ್ರಮುಖಾಂಶಗಳು

* ಉತ್ತರಾಖಂಡ ಜಮ್ಮು ಮತ್ತು ಕಾಶ್ಮೀರ ಲಡಾಖ್ ಹಿಮಾಚಲ ಪ್ರದೇಶ ಮಿಜೋರಾಂ ಮತ್ತು ಅರುಣಾಚಲ ಪ್ರದೇಶಗಳಿಗೆ ಸೇರಿದ ಪ್ರಮುಖ ಯೋಜನೆಗಳ ಲೋಕಾರ್ಪಣೆ

* ಶುಕ್ರವಾರ ಉದ್ಘಾಟನೆಯಾದ 35 ಯೋಜನೆಗಳಲ್ಲಿ 29 ಸೇತುವೆಗಳು ಮತ್ತು ಆರು ರಸ್ತೆಗಳು ಸೇರಿವೆ

* 29 ಸೇತುವೆಗಳ ಪೈಕಿ 10 ಸೇತುವೆಗಳು ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ 8 ಅರುಣಾಚಲ ಪ್ರದೇಶದಲ್ಲಿ 6 ಲಡಾಖ್‌ನಲ್ಲಿ 3 ಉತ್ತರಾಖಂಡದಲ್ಲಿ ಹಿಮಾಚಲ ಪ್ರದೇಶ ಮತ್ತು ಮಿಜೋರಾಂನಲ್ಲಿ ತಲಾ ಒಂದೊಂದು ಸೇತುವೆ ನಿರ್ಮಿಸಲಾಗಿದೆ

* ಆರು ರಸ್ತೆಗಳ ಪೈಕಿ ಮೂರು ರಸ್ತೆಗಳು ಲಡಾಖ್‌ನಲ್ಲಿ ಎರಡು ಸಿಕ್ಕಿಂನಲ್ಲಿ ಮತ್ತು ಒಂದು ರಸ್ತೆಯನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಮಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries